ಗಂಡನಿಂದ ಜೀವನಾಂಶ ಪಡೆಯಲು ನ್ಯಾಯಾಲಯದಲ್ಲಿ ದಾವೆ ಹೂಡಿದಾಕೆ ಮಾವನ ಬ್ಯಾಂಕ್ ಖಾತೆಯಿಂದ 65 ಸಾವಿರ ಎಗರಿಸಿದಳು
ಉಡುಪಿ : ಗಂಡನಿಂದ ವಿಚ್ಛೇದನ ಪಡೆದು ಜೀವನಾಂಶ ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬಳು ತನ್ನ ಮಾವನ ಖಾತೆಯಿಂದ ನಕಲಿ ಸಹಿ ಹಾಕಿ 65 ಸಾವಿರ ರೂ.ಗಳನ್ನು ಡ್ರಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಹಾಬಲಬೆಟ್ಟು ನಿವಾಸಿ ನಿವೃತ ಶಿಕ್ಷಕ ಕೃಷ್ಣ ಶೆಟ್ಟಿ ಎಂಬವರ ಬ್ಯಾಂಕ್ ಆಫ್ ಬರೋಡಾದ ಕಾರ್ಕಳ ಶಾಖೆಯಲ್ಲಿರುವ ಬ್ಯಾಂಕ್ ಖಾತೆಯಿಂದ ಅವರ ಸೊಸೆ ಸರಿತಾ ಅವರು ಕೃಷ್ಣ ಶೆಟ್ಟಿಯವರ ಚೆಕ್‌ಗೆ ನಕಲಿ ಸಹಿ ಮಾಡಿ ಮೂರು ಬಾರಿ 65 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾರೆ.
ಕಳೆದ 2017ರಲ್ಲಿ ಸರಿತಾ ತನ್ನ ಗಂಡ ಸದಾನಂದ ಶೆಟ್ಟಿ ಎಂಬವರಿಂದ ವಿಚ್ಛೇದನ ಕೋರಿ ಮೂಡುಬಿದಿರೆ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ತನ್ನ ಅರ್ಜಿಯನ್ನು ವಾಪಾಸ್ ಪಡೆಯುವುದಾಗಿ ಹೇಳಿ ಆಗಾಗ ಗಂಡನ ಮನೆಗೆ ಬಂದು ಹೋಗುತ್ತಿದ್ದರು. ಇದೇ ವೇಳೆ,ತನ್ನ ಮಾವನ ಬ್ಯಾಂಕ್ ಖಾತೆಯ 4 ಚೆಕ್‌ಗಳನ್ನು ಎಗರಿಸಿ ಕಷ್ಟ ಶೆಟ್ಟಿಯವರ ನಕಲಿ ಸಹಿ ಮಾಡಿ ಎರಡು ಬಾರಿ ತಲಾ 10 ಸಾವಿರ ಹಾಗೂ 45 ಸಾವಿರ ಹಣವನ್ನು ಡ್ರಾ ಮಾಡಿಕೊಂಡಿದ್ದು 4ನೇ ಚೆಕ್ಕಿನಲ್ಲಿ 50 ಸಾವಿರ ಡ್ರಾ ಮಾಡಲು ಮುಂದಾದ ವೇಳೆ ಸಹಿ ತಾಳೆಯಾಗದೇ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ,ಅವರ ಕೃತ್ಯ ಬಯಲಾಗಿತ್ತು.
ಸೊಸೆಯ ಸರಿತಾಳ ಈ ಕೃತ್ಯದ ವಿರುದ್ದ ಮಾವ ಕೃಷ್ಣ ಶೆಟ್ಟಿ ಅವರು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.