ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾಗಿದೆ ವಿಶ್ವದ ಮೊದಲ ಫ್ಲೈಯಿಂಗ್ ಬೈಕ್ | ಅಷ್ಟಕ್ಕೂ ಈ ಹಾರುವ ಬೈಕ್ ನ ಬೆಲೆಯ ಅಂದಾಜು ನಿಮಗಿದೆಯೇ??

ವಿಮಾನಗಳು, ಹೆಲಿಕಾಪ್ಟರ್‌ಗಳೆಲ್ಲವೂ ಆಕಾಶದಲ್ಲಿ ಹಾರಾಡುತ್ತಿದ್ದರೂ ಸಹ ಹಾರುವ ವಾಹನಗಳ ಬಗೆಗಿನ ಜನರ ಕುತೂಹಲ ಇಂದಿಗೂ ತಣಿದಿಲ್ಲ. ವಿಶ್ವದೆಲ್ಲೆಡೆ ಟ್ರಾಫಿಕ್ ಸಮಸ್ಯೆ ಬಿಗಾಡಿಸುತ್ತಿದ್ದಂತೆ ಇದೀಗ ಹಾರುವ ವಾಹನಗಳ ಕಾನ್ಸೆಪ್ಟ್ ಕೂಡ ಮುನ್ನಲೆಗೆ ಬರುತ್ತಿದೆ. ಅದರಂತೆ ಈ ಕಲ್ಪನೆಗಳನ್ನು ದಾಟಿ ಅಮೆರಿಕನ್ ಕಂಪೆನಿಯೊಂದು ಹಾರುವ ಕಾರನ್ನು ಕೆಲದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಜಪಾನ್ ಹಾರುವ ಬೈಕ್​ವೊಂದನ್ನು ಪರಿಚಯಿಸಲಾಗಿದೆ.

ಹೌದು, ಜಪಾನ್‌ನ ನವೋದ್ಯಮ ಎ.ಎಲ್.ಐ ಟೆಕ್ನಾಲಜೀಸ್ ಜಗತ್ತಿನ ಮೊದಲ ವಾಣಿಜ್ಯ ಹೊವರ್ ಬೈಕ್ ಎಕ್ಸ್‌ಟುರಿಸ್ಕೊ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಿಂತ ಸ್ಥಳದಲ್ಲೇ 3 ಮೀಟರ್ ಎತ್ತರಕ್ಕೆ ಹಾರಿ ಬಳಿಕ ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಫೈಯಿಂಗ್ ಬೈಕ್ ಇದು. ಇದಕ್ಕೆ 77.7 ದಶಲಕ್ಷ ಯೆನ್ (5.084 ಕೋಟಿ ರೂಪಾಯಿ) ದರ ನಿಗದಿ ಮಾಡಿದೆ.

ಜಪಾನ್‌ನ ಶಿಝುವೊಕಾ ಪ್ರಿಫೆಕ್ಟರ್‌ನ ಫುಜಿ ಸ್ಪೀಡ್‌ವೇ ರೇಸಿಂಗ್ ಕೋರ್ಸ್‌ನ ರೇಸ್ ಟ್ರಾಕ್‌ನಲ್ಲಿ ಈ ವಾಹನವನ್ನು ಅನಾವರಣಗೊಳಿಸಲಾಗಿದೆ. ಈ ನವೋದ್ಯಮಕ್ಕೆ ಫುಟ್ಬಾಲ್ ತಾರೆ ಕೈಸುಕೆ ಹೊಂಡಾ ಹೂಡಿಕೆ ಮಾಡಿದ್ದಾರೆ. ನಾಲ್ಕು ವರ್ಷದ ಸತತ ಪರಿಶ್ರಮದ ಫಲವಾಗಿ ಈ ಬೈಕ್ ರೂಪುಗೊಂಡಿದೆ. ಇದು 3.7 ಮೀಟರ್ ಉದ್ದ ಇದ್ದು, ಆರು ಪ್ರೊಪೆಲ್ಲರ್‌ಗಳನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಂದಿದೆ. ಈ ಪ್ರೊಪೆಲ್ಲರ್‌ಗಳು ತಿರುಗಲಾರಂಭಿಸಿದಾಗ ಇದು ಹಾರಾಟ ಶುರುಮಾಡುತ್ತದೆ. ಸಾಂಪ್ರದಾಯಿಕ ಇಂಜಿನ್ ಮತ್ತು ಕನಿಷ್ಠ 4 ಬ್ಯಾಟರಿ ಇದರಲ್ಲಿದೆ.

ಈ ಹಾರುವ ಬೈಕ್ ಸುಮಾರು 300 ಕೆ.ಜಿ ತೂಕವನ್ನು ಹೊಂದಿದೆ. ಈ ಹಾರುವ ಬೈಕ್‌ 3.7 ಮೀಟರ್ ಉದ್ದ, 2.4 ಮೀಟರ್ ಅಗಲ ಹಾಗೂ 1.5 ಮೀಟರ್ ಎತ್ತರವನ್ನು ಹೊಂದಿದೆ. ಈ ಬೈಕ್ ಅನ್ನು ಒಬ್ಬರು ಕುಳಿತು ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ ಈ ಹಾರುವ ಬೈಕ್‌ನ ಪ್ರಯಾಣದ ಅವಧಿ 30 ರಿಂದ 40 ನಿಮಿಷಗಳಾಗಿದೆ. ಕಂಪನಿಯು ಈ ಹಾರುವ ಬೈಕಿನ ಗರಿಷ್ಠ ವೇಗವನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಂಪನಿಯು ಈ ಹಾರುವ ಬೈಕಿನ ಎಲೆಕ್ಟ್ರಿಕ್ ಆವೃತ್ತಿಯನ್ನು 2025 ರ ವೇಳೆಗೆ ಬಿಡುಗಡೆಗೊಳಿಸಲಿದೆ.

ಪ್ರಪಂಚದ ಹಲವೆಡೆ ಹಾರುವ ಕಾರುಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಲ್ಲಿಯೂ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಮೂಲದ ವಿನತಾ ಏರೋಮೊಬಿಲಿಟಿ ಕಂಪನಿಯು ಭಾರತದ ಮೊದಲ ಹಾರುವ ಹೈಬ್ರಿಡ್ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ವಿನತಾ ಏರೋಮೊಬಿಲಿಟಿ ಕಂಪನಿಯು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

Leave A Reply

Your email address will not be published.