ಪ್ರಾಣಿ ಸಂಗ್ರಹಾಲಯದಲ್ಲಿ ಪ್ರವಾಸಿಗನೊಬ್ಬನ ಹುಚ್ಚಾಟ| ನೋಡು ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ಹೋಗಿ ನಿಂತುಕೊಂಡಾತನ ವಿಡಿಯೋ ವೈರಲ್ !!

ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳ ಜೊತೆ ಎದೆ ಝಲ್ ಅನ್ನುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತಿವೆ. ಇಂತಹ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅಭಯಾರಣ್ಯಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ನಿಂತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿವೆ.

ಹೌದು, ಈ ಘಟನೆ ನಡೆದಿದ್ದು ಚೀನಾದ ಬೀಜಿಂಗ್ ನಲ್ಲಿ. ಹುಲಿಗಳ ಮುಂದೆ ಹೋದ ವ್ಯಕ್ತಿ ಸುಮ್ಮನೇ ನಿಲ್ಲದೇ ಹುಚ್ಚಾಟ ಪ್ರದರ್ಶಿಸಿದ್ದಾನೆ. ಇನ್ನು ಪ್ರಾಣಿ ಸಂಗ್ರಹಾಲಯಕ್ಕೆ ಆಗಮಿಸಿದ್ದ ಪ್ರವಾಸಿಗರು ವ್ಯಕ್ತಿಯ ಹುಚ್ಚಾಟ ಕಂಡು ನಿಬ್ಬೆರಗಾಗಿದ್ದಾರೆ. ಪ್ರವಾಸಿಗರು ಈ ಎಲ್ಲ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 11 ಬಿಳಿ ಹುಲಿಗಳ ಮುಂದೆ ಹೋದ ವ್ಯಕ್ತಿ ಏನಾದ ಎಂಬುದರ ಮಾಹಿತಿ ಇಲ್ಲಿದೆ.

ಬೀಜಿಂಗ್ ನಗರದಲ್ಲಿರುವ ವೈಲ್ಡ್ ಲೈಫ್ ಪಾರ್ಕ್ ನಲ್ಲಿ ಅಕ್ಟೋಬರ್ 21 ರಂದು ಈ ಘಟನೆ ನಡೆದಿದೆ. ಹುಲಿಗಳಿರುವ ಸ್ಥಳದಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರು ಪ್ರಾಣಿಗಳನ್ನು ನೋಡುತ್ತಿದ್ದರು. ಆದರೆ ಆ ಪ್ರವಾಸಿಗರ ಗುಂಪಿನಲ್ಲಿ ನಿಂತಿದ್ದ ವ್ಯಕ್ತಿ ಮಾಡಿದ ಕೆಲಸ ಕಂಡು ಅಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ದರು. ಝೂ ವೀಕ್ಷಣೆಗೆ ಬಂದಿದ್ದ ವ್ಯಕ್ತಿ 11 ಹುಲಿಗಳ ಮುಂದೆ ಹೋಗಿ ಸ್ಟಂಟ್ ಮಾಡಲು ಪ್ರಯತ್ನಿಸಿದ್ದಾನೆ.

https://youtu.be/QzxEkaVLlGQ

ಹುಲಿಗಳ ಮುಂದೆ ಹೋಗಿದ್ದೇಗೆ?

ದಿ ಸನ್ ಯುಕೆ ವರದಿ ಪ್ರಕಾರ, ಹುಲಿಗಳ ಮುಂದೆ ಹೋದ ವ್ಯಕ್ತಿ ಝೂನಲ್ಲಿ ಸೆಲ್ಫ್ ಡ್ರೈವಿಂಗ್ ಟೂರ್ ಸರ್ವಿಸ್ ತೆಗೆದುಕೊಂಡಿದ್ದನು. ಹಾಗಾಗಿ ಒಬ್ಬನೇ ಡ್ರೈವಿಂಗ್ ಮಾಡುತ್ತಾ ಝೂ ಸುತ್ತಾಡುತ್ತಿದ್ದನು. ಮೃಗಾಲಯದಲ್ಲಿ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಹುಲಿಗಳ ಮುಂದೆ ಬರುತ್ತಿದ್ದಂತೆ ಜೀಪ್ ನಿಂದ ಹೊರಗೆ ಜಿಗಿದು, ಅವುಗಳ ಮುಂದೆ ಹೋಗಿ ನಿಂತಿದ್ದಾನೆ.

ಕೂದಲೆಳೆ ಅಂತರದಲ್ಲಿ ಉಳಿಯಿತು ಪ್ರವಾಸಿಗನ ಜೀವ

ಹುಲಿಗಳ ಮುಂದೆ ಹೋದ ವ್ಯಕ್ತಿ ಒಮ್ಮೆ ಕುಳಿತುಕೊಂಡರೆ ಮತ್ತೊಮ್ಮೆ ನಿಂತುಕೊಳ್ಳುತ್ತಿದ್ದನು. ವ್ಯಕ್ತಿಯ ಹುಚ್ಚಾಟ ಕಂಡ ಇತರೆ ಪ್ರವಾಸಿಗರು ಆತನೇ ಪ್ರಾಣವೇ ಹೋಯ್ತು ಎಂದು ಒಂದು ಕ್ಷಣ ತಿಳಿದಿದ್ದರು. ವ್ಯಕ್ತಿ ಹುಲಿಗಳ ಮುಂದೆ ಹೋಗುತ್ತಿದ್ದಂತೆಯೇ ಎಚ್ಚೆತ್ತ ಅಭಯಾರಣ್ಯ ಸಿಬ್ಬಂದಿ ಹುಲಿಗಳ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾರೆ‌ ನಂತರ ಹುಲಿಗಳಿಗೆ ಆಹಾರ ತೋರಿಸಿ ಅದನ್ನು ದೂರ ದೂರ ಎಸೆದಿದ್ದಾರೆ. ಆಹಾರ ಕಂಡು ಹುಲಿಗಳು ಓಡಿ ಹೋಗುತ್ತಿದ್ದಂತೆ ಪ್ರವಾಸಿಗನನ್ನು ರಕ್ಷಿಸಲಾಗಿದೆ.

ಮತ್ತಷ್ಟು ಭದ್ರತೆ ಹೆಚ್ಚಳ ಮಾಡೋದಾಗಿ ಹೇಳಿದ ಸಿಬ್ಬಂದಿ

ಅಭಯಾರಣ್ಯ ಸಿಬ್ಬಂದಿ ಪ್ರವಾಸಿಗನನ್ನು ರಕ್ಷಿಸಿ ಹೊರ ಕರೆ ತಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಪ್ರವಾಸಿಗನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರವಾಸಿಗನನ್ನು 56 ವರ್ಷದ ಜಿಯಾಂಗ್ ಎಂದು ಗುರುತಿಸಲಾಗಿದೆ. ಇತ್ತ ಅಭಯಾರಣ್ಯ ಸಿಬ್ಬಂದಿ ಇನ್ನಷ್ಟು ಭದ್ರತಾ ವ್ಯವಸ್ಥೆ, ಸೆಲ್ಫ್ ಡ್ರೈವಿಂಗ್ ಟೂರ್ ಗೆ ಬಳಸುವ ವಾಹನಗಳಿಗೆ ಲಾಕ್ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿದ್ದಾರೆ.

ಸಿಂಹದ ಮುಂದೆ ಕುಳಿತ ವ್ಯಕ್ತಿ

ಇತ್ತೀಚೆಗೆ ಈ ರೀತಿಯ ಘಟನೆ ನಮ್ಮ ದೇಶದಲ್ಲೂ ನಡೆದಿದೆ. ದೆಹಲಿ ಮೃಗಾಲಯದಲ್ಲಿ ಬಿಹಾರ ಮೂಲದ ರೆಹಾನ್ ಖಾನ್ (28) ಎಂಬ ವ್ಯಕ್ತಿ ಸಿಂಹದ ಮುಂದೆ ಹೋಗಿ ಕುಳಿತಿದ್ದನು. ಮೃಗಾಲಯಕ್ಕೆ ಬಂದಿದ್ದ ರೆಹಾನ್ ಖಾನ್, ಸಿಂಹವಿರುವ ಎತ್ತರದ ಕಬ್ಬಿಣದ ಬೇಲಿಯನ್ನು ನೆಗೆದು ಸಿಂಹದ ಆವರಣದೊಳಗೆ ಪ್ರವೇಶಿಸಿದ್ದನು. ಬಳಿಕ ಸಿಂಹದ ಮುಂದೆ ಹೋಗಿ ಕುಳಿತಿದ್ದನು. ಸಿಂಹ ಕೂಡ ಆತನ ಹತ್ತಿರ ಬಂದು ನಿಂತುಕೊಳ್ಳುತ್ತದೆ. ಆತ ಸಿಂಹದ ಎದುರು ಹಲವು ನಿಮಿಷಗಳ ಕಾಲ ತುಂಬಾ ಆತ್ಮೀಯವಾಗಿ ಇರುವಂತೆ ನಟಿಸಿದ್ದನು. ರೆಹಾನ್ ಸಿಂಹದ ಮುಂದೆ ಕುಳಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Leave A Reply

Your email address will not be published.