ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಗೆ ಇದೀಗ ಕೊರೋನಾ ಎರಡನೇ ಡೋಸ್ !! | ಕರಾವಳಿಯಲ್ಲಿ ನಡೆದಿದೆ ಹೀಗೊಂದು ವಿಚಿತ್ರ ಘಟನೆ

Share the Article

ಆರು ತಿಂಗಳ ಹಿಂದೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದೀಗ ಆ ವ್ಯಕ್ತಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ. ಹೌದು ಈ ವಿಚಿತ್ರ ಘಟನೆ ನಡೆದದ್ದು ನಮ್ಮ ದಕ್ಷಿಣ ಕನ್ನಡದಲ್ಲಿಯೇ!!

ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ ಎಂಬುವರು 2021 ರ ಏ.27 ರಂದು ಮೃತಪಟ್ಟಿದ್ದರು. ಆದರೆ, ಅ.14ರಂದು ಅವರಿಗೆ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಮಗನ ಮೊಬೈಲ್‌ಗೆ ಬಂದಿದೆ.

ನನ್ನ ತಂದೆಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯ ಪ್ರಥಮ ಡೋಸ್ ನೀಡಲಾಗಿತ್ತು. ಎರಡನೇ ಡೋಸ್ ಪಡೆಯುವ ಮೊದಲೇ ನನ್ನ ತಂದೆ ತೀರಿಕೊಂಡಿದ್ದಾರೆ. ಆದರೆ, ಅ.14ರಂದು ನನ್ನ ಮೊಬೈಲ್‌ಗೆ ಒಟಿಪಿ ಬಂದಿದ್ದು ಬಳಿಕ ಎಸ್ಎಂಎಸ್ ಬಂದಿದೆ. ಅದರಲ್ಲಿ ನನ್ನ ತಂದೆಗೆ ಎರಡನೇ ಡೋಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಎಸ್ಎಂಎಸ್ ಲಿಂಕ್ ಓಪನ್ ಮಾಡಿ ಪಿಡಿಎಫ್ ಪರಿಶೀಲಿಸಿದಾಗ ಅದರಲ್ಲೂ ಎರಡನೇ ಡೋಸ್ ನೀಡಿರುವುದನ್ನು ದೃಢಪಡಿಸಿರುವ ಉಲ್ಲೇಖವಿದೆ. 2 ತಿಂಗಳ ಹಿಂದೆ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕರೆ ಬಂದಿತ್ತು. ತಂದೆಗೆ ಎರಡನೇ ಡೋಸ್ ನೀಡುವಂತೆ ಹೇಳಿದ್ದರು. ತಂದೆಯ ನಿಧನದ ಮಾಹಿತಿ ನೀಡಿದ್ದೆ. ಆದರೂ ಎರಡನೇ ಡೋಸ್ ನೀಡಿರುವ ಸಂದೇಶ ಬಂದಿದೆ ಎಂದು ಸಾದಿಕ್ ದೂರಿದ್ದಾರೆ.

ಈ ಘಟನೆ ಇದೀಗ ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ತಿಳಿಸಿದ್ದಾರೆ.

Leave A Reply

Your email address will not be published.