ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ | 18 ಜಾನುವಾರು ವಶಕ್ಕೆ,ಇಬ್ಬರ ಬಂಧನ

ಹುಬ್ಬಳ್ಳಿಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬುಧವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 18 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಚಾಲಕ ಹುಬ್ಬಳ್ಳಿಯ ಕಲಂದರ್‌ (33) ಮತ್ತು ಕ್ಲೀನರ್‌ ಕಲಘಟಗಿಯ ಅಬ್ದುಲ್‌ ರೆಹಮಾನ್‌ (35) ನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆರಿಫ್‌ ಪರಾರಿಯಾಗಿದ್ದಾನೆ.

ಹೆಜಮಾಡಿ ಟೋಲ್‌ಗೇಟ್‌ ಬಳಿ ಪಡುಬಿದ್ರಿ ಎಸ್ಸೆ$ç ಅಶೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜಾನುವಾರು ಸಹಿತ ಒಟ್ಟು 18 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಟಾಟೆ, ಈರುಳ್ಳಿ ಸಾಗಾಟವೆಂದರು…
ಹರಿಯಾಣ ನೋಂದಣಿಯ ಲಾರಿ ಹುಬ್ಬಳ್ಳಿಯಿಂದ ಬರುತ್ತಿದ್ದು, ಪೊಲೀಸರು ಹೆಜಮಾಡಿ ಟೋಲ್‌ಗೇಟ್‌ ಬಳಿ ತಡೆದು ನಿಲ್ಲಿಸಿ ಚಾಲಕನಲ್ಲಿ ವಿಚಾರಿಸಿದಾಗ ಅದರಲ್ಲಿ ಬಟಾಟೆ ಹಾಗೂ ಈರುಳ್ಳಿ ಮೂಟೆಗಳು ಇರುವುದಾಗಿ ತಿಳಿಸಿದ್ದ. ಮತ್ತೆ ಅನುಮಾನಗೊಂಡ ಪೊಲೀಸರು ಚಾಲಕನನ್ನು ವಿಚಾರಿಸಿದಾಗ ಜಾನುವಾರುಗಳು ಇರುವುದು ಪತ್ತೆಯಾಗಿದೆ. ಬಳಿಕ ಲಾರಿಯನ್ನು ಪಡುಬಿದ್ರಿ ಠಾಣೆಗೆ ತರಲಾಯಿತು.

ಲಾರಿಯಲ್ಲಿ 5 ಎಮ್ಮೆ, 3 ಕೋಣ ಹಾಗೂ 10 ಎತ್ತುಗಳಿದ್ದು, ಅದರಲ್ಲಿ ಒಂದು ಎತ್ತು ಸಾವನ್ನಪ್ಪಿದೆ. ಸ್ಥಳೀಯ ಪಶು ವೈದ್ಯಾಧಿಕಾರಿ ಮೂಲಕ ಚಿಕಿತ್ಸೆ ಕೊಡಿಸಲಾಗಿದೆ. ಸಾವನ್ನಪ್ಪಿದ ಎತ್ತಿನ ಮರಣೋತ್ತರ ಪರೀಕ್ಷೆ ಮಾಡಿ ದಫನ ಮಾಡಲಾಯಿತು. ಘಟನೆಯ ವೇಳೆ ಲಾರಿಯಲ್ಲಿದ್ದ ಕೋಣವೊಂದು ತಪ್ಪಿಸಿಕೊಂಡು ಪರಾರಿಯಾಗಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

Leave A Reply

Your email address will not be published.