ಭಾರಿ ಮಳೆಯ ಜೊತೆಗೆ ಆಕಾಶದಿಂದ ತಪತಪ ಉದುರಿದ ಮೀನುಗಳು!! | ಮೀನಿನ ಮಳೆಯಲ್ಲಿ ಸುಮಾರು 50 ಕೆ.ಜಿಯಷ್ಟು ಮೀನು ಸಂಗ್ರಹಿಸಿದ ಸ್ಥಳೀಯರು
ಆಗಸದಿಂದ ಒಂದೊಮ್ಮೆ ಭೋರ್ಗರೆವ ಮಳೆ ಜೊತೆಗೆ ಆಲಿಕಲ್ಲು ಬೀಳುವುದನ್ನು ಕೇಳಿರುತ್ತೇವೆ, ಜೊತೆಗೆ ಒಮ್ಮೆಯಾದರೂ ನೋಡಿರುತ್ತೇವೆ. ಆದರೆ ಎಂದಾದರೂ ಮೀನಿನ ಮಳೆ ಬಿದ್ದಿರುವುದನ್ನು ಕೇಳಿದ್ದೀರಾ. ಹೌದು, ನಿಮಗೆ ಅಚ್ಚರಿಯೆನಿಸಿದ್ರೂ ಇದು ನಿಜ ಘಟನೆ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಜನರು ಆಶ್ಚರ್ಯದ ಜೊತೆಗೆ ಆತಂಕಕ್ಕೆ ಒಳಗಾಗಿದ್ದಾರೆ.
ಭದೋಹಿ ಪ್ರದೇಶದಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಜೋರಾದ ಗಾಳಿ ಮಳೆಯ ಜೊತೆಗೆ ಆಕಾಶದಿಂದ ಮೀನುಗಳು ಸುರಿದಿವೆ. ಮೀನುಗಳು ಬೀಳುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಇದೊಂದು ಪವಾಡ ಅಂತಲೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸ್ಥಳೀಯರು ಮೀನಿನ ಮಳೆ ಬಿದ್ದಿರೋದು ಇದೇ ಮೊದಲು ಅಂತಾ ಹೇಳುತ್ತಿದ್ದಾರೆ.
ಮಳೆಯ ನಡುವಲ್ಲೇ ಸ್ಥಳೀಯರು ಸುಮಾರು 50 ಕೆ.ಜಿಯಷ್ಟು ಮೀನನ್ನು ಸಂಗ್ರಹಿಸಿದ್ದಾರೆ. ಆರಂಭದಲ್ಲಿ ಆಲಿಕಲ್ಲು ಸುರಿಯುತ್ತಿರಬಹುದು ಎಂದು ಜನರು ಭಾವಿಸಿಕೊಂಡಿದ್ದರು. ಆದರೆ ಮೀನುಗಳು ನೆಲಕ್ಕೆ ಬಿದ್ದು ಒದ್ದಾಡುವುದಕ್ಕೆ ಶುರು ಮಾಡಿವೆ. ಇದರಿಂದಾಗಿ ಸ್ಥಳೀಯರು ಮೀನುಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದಾರೆ.
ಮೀನಿನ ಮಳೆಯನ್ನು ಕಂಡು ಕೆಲವರು ಮೀನುಗಳನ್ನು ಸಂಗ್ರಹಿಸಿದ್ದರೆ, ಇನ್ನೂ ಕೆಲವರು ಭಯ ಭೀತರಾಗಿದ್ದಾರೆ. ಈ ಕುರಿತು ಸಂಶೋಧಕರು ಮೀನಿನ ಮಳೆಯ ರಹಸ್ಯವನ್ನು ಬೇಧಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲೀಗ ಮೀನ ಮಳೆಯದ್ದೇ ಸುದ್ದಿ ಹರಿದಾಡುತ್ತಿದೆ.