ಚೀನಿ ಆಟಿಕೆಗಳು ಮಕ್ಕಳ ಆರೋಗ್ಯಕ್ಕೆ ಡೇಂಜರ್.. ಡೇಂಜರ್..!! | ಅನ್ನನಾಳ ಹಾಗೂ ಶ್ವಾಸಕೋಶಕ್ಕೆ ಅಪಾಯಕಾರಿ ಜೊತೆಗೆ ಕ್ಯಾನ್ಸರ್ ಗೂ ರಹದಾರಿ!!

Share the Article

ಆಟಿಕೆಗಳು ಅಥವಾ ಸಾಮಾನ್ಯ ಭಾಷೆಯಲ್ಲಿ ಆಟ ಸಾಮಾನು ಎಲ್ಲರೂ ಇವುಗಳೊಂದಿಗೆ ಆಟ ಆಡಿಯೇ ಇರುತ್ತಾರೆ. ನಾವು ಚಿಕ್ಕವರಿದ್ದಾಗ ಹಾಗೂ ನಮ್ಮ ಮಕ್ಕಳು ಚಿಕ್ಕವರಿದ್ದಾಗ ಮನೆಯಲ್ಲಿ ಎಲ್ಲೆಲ್ಲೂ ಕಾಣುವುದು ಈ ಆಟಿಕೆಗಳು.

ಹಿಂದೆ ಆಟಿಕೆಗಳ ಪ್ರಮಾಣ ಕಡಿಮೆ ಇರುತ್ತಿತ್ತು. ಮಡಿಕೆಯ ಆಟಿಕೆಗಳು, ಹಿತ್ತಾಳೆಯವು, ಮರದಿಂದ ಮಾಡಿದವು ಈ ರೀತಿ ಇರುತ್ತಿದ್ದವು. ಕಾಲ ಕ್ರಮೇಣ ಅನೇಕ ತರಹದ ಆಟಿಕೆಗಳು ಮಾರುಕಟ್ಟೆಯಲ್ಲಿ ಬಂದಿವೆ. ಇದೀಗ ಪ್ಲಾಸ್ಟಿಕ್ ಆಟಿಕೆಗಳ ಪಾರುಪತ್ಯವೇ ಅಧಿಕ. ಆದರೆ ಕಡಿಮೆ ಬೆಲೆ, ನೋಡಲು ಆಕರ್ಷಕವಾಗಿದೆ ಎಂಬ ಕಾರಣಕ್ಕೆ ಚೀನಾ ಆಟಿಕೆಗಳನ್ನು ಖರೀದಿಸಿ, ಮಕ್ಕಳ ಕೈಗಿಡುವ ಮುನ್ನ ಎಚ್ಚರ. ಇದರಿಂದ ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಗಳೂ ಬರಬಹುದು!

ಹೌದು,ಚೀನಾ ಆಟಿಕೆಗಳಲ್ಲಿ ಅತಿಯಾದ ರಾಸಾಯನಿಕ ಬಳಸುತ್ತಿರುವುದು ಇದಕ್ಕೆ ಕಾರಣ. ಚೀನಾ ಆಟಿಕೆಗಳು ಕಳಪೆಯಾಗಿದ್ದು, ಮಕ್ಕಳ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಇವು ಅಪಾಯಕಾರಿ ರಾಸಾಯನಿಕ ಅಂಶ ಹೊಂದಿವೆ ಎಂದು ಅಮೆರಿಕ ಹೇಳಿದ್ದು, ಇವುಗಳಿಗೆ ನಿರ್ಬಂಧ ವಿಧಿಸಿದೆ. ಇಂಥ ಆಟಿಕೆಗಳು ಭಾರತದ ಮಾರುಕಟ್ಟೆ ತುಂಬ ಆವರಿಸಿರುವುದು ಆತಂಕ ಮೂಡಿಸಿ ಕೇಂದ್ರ ಸರ್ಕಾರದ 2018-19ನೇ ಸಾಲಿನ ವರದಿ ಪ್ರಕಾರ ದೇಶದಲ್ಲಿ ಮಕ್ಕಳ ಆಟಿಕೆಗಳ 10 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಈ ಪೈಕಿ ಶೇ.70 ಚೀನಾ ಆಟಿಕ ಆಗಿದೆ. ಉಳಿದ ಶೇ.20 ದೇಶಿ ಮತ್ತು ಶೇ.10 ಇತರ ದೇಶದಿಂದ ಬಂದಂಥವು. ಭಾರತದಲ್ಲಿ ಸುಮಾರು 20 ವರ್ಷಗಳಿಂದ ಚೀನಾ ಆಟಿಕೆಗಳ ದರ್ಬಾರು ಹೆಚ್ಚಾಗಿದೆ.

ಅಪಾಯ ಹೇಗೆ?

ಹೊಳಪು ಬರಲು ಆಟಿಕೆಗಳಿಗೆ ಸೀಸ, ಬೇರಿಯಂ, ಕಾಡ್ಮಿಯಂನಂತಹ ವಿಷಕಾರಿ ರಾಸಾಯನಿಕಗಳನ್ನು ವಿಪರೀತವಾಗಿ ಲೇಪಿಸಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಇದು ಮಾರಕ ಪರಿಣಾಮ ಬೀರಲಿದೆ. ಆಟಿಕೆ ಖರೀದಿಸುವಾಗ ಎಚ್ಚರ ವಹಿಸುವಂತೆ ಅಮೆರಿಕದ ಸೀಮಾ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಇಲಾಖೆ ಎಚ್ಚರಿಕೆ ನೀಡಿದೆ. ಆಟಿಕೆಗಳ ತಯಾರಿಸಲು ಮಕ್ಕಳ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಮಕ್ಕಳ ಆಟಿಕೆ ಬಿಡಿ ಭಾಗದಿಂದ ಕೂಡಿರಬಾರದು. ಗುಣಮಟ್ಟದ ಕಚ್ಚಾವಸ್ತು ಬಳಸಿ ತಯಾರಿಸಬೇಕು. ಆದರೆ ಚೀನಾ ಕಂಪನಿಗಳು ಕಳಪೆ ಪ್ಲಾಸ್ಟಿಕ್, ಬಣ್ಣ, ಬ್ಯಾಟರಿ ಮತ್ತು ಬಿಡಿ ಭಾಗಗಳನ್ನು ಬಳಸುತ್ತಿವೆ. ಕಡಿಮೆ ಬೆಲೆ ಕಾರಣಕ್ಕೆ ಈ ಆಟಿಕೆಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ.ಇದರಿಂದ ಮಕ್ಕಳ ಆರೋಗ್ಯ, ಪರಿಸರ ಮಾಲಿನ್ಯ ಮತ್ತು ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.

ಏನೆಲ್ಲ ಕಾಯಿಲೆ ಬರುತ್ತೆ?

ಅತಿಯಾದ ರಾಸಾಯನಿಕ ಬಳಸಲಾದ ಚೀನಾ ಆಟಿಕೆಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಕ್ಯಾನ್ಸರ್, ಚರ್ಮ ರೋಗ ಮತ್ತು ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಕಳಪೆ ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳಿಂದ ಕೂಡಿರುವ ಆಟಿಕೆಗಳನ್ನು ಮಕ್ಕಳು ಸವಿಯುವುದು ಅಥವಾ ಬಾಯಲ್ಲಿ ಇಟ್ಟುಕೊಂಡಾಗ ಕೆಮಿಕಲ್ ದೇಹದ ಒಳಗೆ ಸೇರುತ್ತದೆ. ಚರ್ಮ ರೋಗವೂ ಬರುವ ಸಾಧ್ಯತೆ ಇದೆ. ಚೀನಾ ಆಟಿಕೆಯಲ್ಲಿ ಬಳಸುವ ಬ್ಯಾಟರಿಗಳನ್ನು ಮಕ್ಕಳು ಆಕಸ್ಮಿಕವಾಗಿ ನುಂಗಿದರೆ ಅಲ್ಕಲೀನ್ ಕೆಮಿಕಲ್ ಅನ್ನನಾಳಕ್ಕೆ ಸೇರಿಕೊಂಡು ರಂಧ್ರ ಉಂಟಾಗಿ ಆಹಾರ ಸೇರುವುದಿಲ್ಲ. ಜೊತೆಗೆ ರಕ್ತನಾಳಕ್ಕೂ ಹೋಗಿ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಎರಡು ತಿಂಗಳಿಗೆ ಒಂದು ದಾಖಲಾಗುತ್ತಿದೆ. ಚೀನಾ ಬಲೂನ್ ಮತ್ತು ವಿಕಿರಣ ಸೂಸುವ ಆಟಿಕೆಗಳಿಂದ ಮಕ್ಕಳ ಕಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ. ನ್ಯುಮೋನಿಯಾದಂಥ ರೋಗ ಬರಬಹುದಾಗಿದ್ದು, ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಬೇಕೆಂಬುದು ವೈದ್ಯರ ಸಲಹೆ.

ಬಿಡಿಭಾಗ ನುಂಗುವ ಸಾಧ್ಯತೆಗಳಿವೆ:

ಬಹುತೇಕ ಚೀನಾ ಆಟಿಕೆಗಳು ಬಿಡಿಭಾಗದಿಂದ ಕೂಡಿರುತ್ತವೆ. ಪ್ಲಾಸ್ಟಿಕ್ ತುಂಡುಗಳು, ನಟ್ಟು, ಬೋಲ್ಟ್, ಬ್ಯಾಟರಿ ಇನ್ನಿತರ ಬಿಡಿಭಾಗಗಳನ್ನು ಮಕ್ಕಳು ನುಂಗಿದರೆ ಅವರ ಪ್ರಾಣಕ್ಕೆ ಸಂಚಕಾರ ಉಂಟಾಗಬಹುದು. ಉಸಿರಾಟದ ತೊಂದರೆ ಯಾಗಿ ತುರ್ತು ಶಸ್ತ್ರಚಿಕಿತ್ಸೆ ಮಾಡಿ ಆಟಿಕೆ ಬಿಡಿಭಾಗ ಹೊರತೆಗೆಯುವ ಪರಿಸ್ಥಿತಿಯೂ ಎದುರಾಗಬಹುದು.

ಪರಿಸರ ಮಾಲಿನ್ಯ:

ಪರಿಸರ ಮಾಲಿನ್ಯ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲಾಗುತ್ತಿದೆ. ಆದರೆ, ಚೀನಾ ಆಟಿಕೆಗಳು ಪ್ಲಾಸ್ಟಿಕ್‌ನಿಂದ ಕೂಡಿದ್ದು, ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಕೆಲವೇ ದಿನಕ್ಕೆ ಕಿತ್ತು ಹೋಗುವ ಕಾರಣ ಅನುಪಯುಕ್ತ ವಸ್ತುವೆಂದು ಎಸೆಯಲಾಗುತ್ತದೆ. ಪರಿಣಾಮ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಚನ್ನಪಟ್ಟಣ ಮತ್ತು ಕೊಪ್ಪಳ ಜಿಲ್ಲೆಯ ಕಿನ್ನಾಳದ ಆಟಿಕೆಗಳನ್ನು ಮರದಿಂದ ಮಾಡಲಾಗುತ್ತದೆ. ಇವುಗಳನ್ನು ದೀರ್ಘಕಾಲ ಬಳಸಬಹುದು ಮತ್ತು ಪರಿಸರ ಮಾಲಿನ್ಯದ ಅಪಾಯ ಇಲ್ಲ.

Leave A Reply

Your email address will not be published.