ಚರಂಡಿ ನೀರು ಮಿಶ್ರಿತಗೊಂಡ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ವಿಜಯಪುರ:ಚರಂಡಿ ನೀರು ಮಿಶ್ರಿತಗೊಂಡ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.

 

ಗುರುರಾಜ್ ಬಸವರಾಜ ಮಳಗಿ (21) ಹಾಗೂ ನೀಲಮ್ಮ ನಾರಾಯಣಪ್ಪ ಬೆನಕಣ್ಣವರ (65) ಎಂಬುವವರು ಮೃತಪಟ್ಟಿದ್ದಾರೆ.

ನೀರಿಗೆ ಚರಂಡಿ ನೀರು ಮಿಶ್ರಿತಗೊಂಡಿದ್ದು, ಇದೇ ನೀರನ್ನು ಗ್ರಾಮಕ್ಕೆ ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.ಕಲುಷಿತ ನೀರು ಸೇವನೆ ಮಾಡುತ್ತಿದ್ದಂತೆಯೇ ಗ್ರಾಮದಲ್ಲಿ ಹಲವರಿಗೆ ವಾಂತಿ ಹಾಗೂ ಭೇದಿ ಶುರುವಾಗಿದೆ. ಘಟನಯಲ್ಲಿ 6 ಮಂದಿ ಅಸ್ವಸ್ಥರಾಗಿದ್ದು, ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 6 ಮಂದಿಯ ಪೈಕಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಕೊಳಚೆ ನೀರು ಕುಡಿವ ನಲ್ಲಿಗೆ ನೀರಿಗೆ ಸಂಪರ್ಕ ಹೊಂದಿದರೂ ಎಚ್ಚೆತ್ತುಕೊಳ್ಳದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಎಂದು ಆಕ್ರೋಶ ವ್ಯಕ್ತವಾಗಿದ್ದು,ಘಟನೆ ಬಳಿಕ ಆರೋಗ್ಯಾಧಿಕಾರಿಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನ ಕರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತ್ ಸಿಇಒ ಗೋವಿಂದ ರೆಡ್ಡಿಯವರು, ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಕಲುಷಿತ ನೀರಿನಿಂದ ಇಬ್ಬರು ಮೃತಪಟ್ಟಿಲ್ಲ. ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದ್ದಾರೆ. ಇನ್ನು 21 ವರ್ಷದ ವ್ಯಕ್ತಿ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರೂ ಕೂಡ ಬಲವಂತವಾಹಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.

ಇದೀಗ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಮನೆಗಳಲ್ಲಿದ್ದ ಎಲ್ಲಾ ನೀರನ್ನು ಖಾಲಿ ಮಾಡಿದ್ದಾರೆ. ಅಲ್ಲದೆ, ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಗುಣಮಟ್ಟ ಪರೀಕ್ಷೆಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ.ವಿಷಯುಕ್ತ ನೀರಿನಿಂದಲೇ ಸಾವು ಸಂಭವಿಸಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಈ ಗ್ರಾಮದಲ್ಲಿ ಹಳೆ ಪೈಪ್‌ಲೈನ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಜಲ ಜೀವನ್ ಮಿಷನ್ ಕಾಮಗಾರಿಗಳು ಇನ್ನೂ ನಡೆಯುತ್ತಿವೆ’ ಎಂದು ಜಿಪಂ ಸಿಇಒ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.