ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ
ವಿದ್ಯಾರ್ಥಿ ಸಂಘಟನೆಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು- ರವಿಮುಂಗ್ಲಿಮನೆ
ಪುತ್ತೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಂಡು ಮುಂದಿನ ಜೀವನಕ್ಕೆ ಅಗತ್ಯವಿರುವ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು. ಪರಿಶ್ರಮ ಮತ್ತು ಪ್ರಾಮಾಣಿಕತೆಯ ಪ್ರತಿನಿಧಿಗಳಾಗಬೇಕು. ಉತ್ತಮ ವ್ಯಕ್ತಿತ್ವ ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಹೊಸ ಬೆಳಕು ನೀಡಬೇಕು ಎಂದು ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ದಿನೇಶ್ ಶೆಣೈ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ 2021-22 ಸಾಲಿನ ವಿದ್ಯಾರ್ಥಿ ಸಂಘ, ವಿಜ್ಞಾನ, ವಾಣಿಜ್ಯ, ಸಾಹಿತ್ಯ, ಕ್ರೀಡಾಸಂಘ ಮತ್ತು ಇಕೋ ಕ್ಲಬ್ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಮ್ಮತದಿಂದ ಕಾರ್ಯ ನಿರ್ವಹಿಸುವ ಮನೋಭಾವವನ್ನು ಬೆಳೆಸಿಕೊಂಡು ಪರಂಪರೆ, ಪರಿಸರ ಮತ್ತು ಕಠಿಣ ಪರಿಶ್ರಮದ ನೆಲೆಗಟ್ಟಿನಲ್ಲಿ ಮೌಲ್ಯಾಧರಿತ ಜೀವನವನ್ನು ರೂಢಿಸಿಕೊಂಡರೆ ಬದುಕು ಉತ್ತಮವಾಗುತ್ತದೆ. ಸೋಲು ಎದುರಾದಾಗ ಧೈರ್ಯದಿಂದ ಎದುರಿಸಿ ವಾಸ್ತವಕ್ಕೆ ಮುಖಮಾಡಿ ನಿಲ್ಲಬೇಕು. ಮಹತ್ವಾಕಾಂಕ್ಷೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ರವಿಮುಂಗ್ಲಿಮನೆ ಮಾತನಾಡಿ ವಿದ್ಯಾರ್ಥಿ ಸಂಘಟನೆಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ವಿದ್ಯಾರ್ಥಿಗಳು ಬದುಕನ್ನು ಗೌರವಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಪಡೆದುಕೊಳ್ಳಬೇಕು. ನಿಜವಾದ ಶಿಕ್ಷಣವು ಜೀವನದಲ್ಲಿ ಎದುರಾಗುವ ನಾನಾ ರೀತಿಯ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ನೀಡುತ್ತದೆ. ಅಂಕಗಳಿಕೆಗೆ ಮಾತ್ರ ಸೀಮಿತವಾಗದೆ ಬದುಕಿನಲ್ಲಿ ಉತ್ತಮ ಅಭಿರುಚಿ, ಆಸಕ್ತಿ, ಅನುಭವಜ್ಞಾನ ಮತ್ತು ಜೀವನಪ್ರೀತಿಯನ್ನು ಅಳವಡಿಸಿಕೊಂಡು ಬದ್ಧತೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು. ಆಧುನಿಕ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿಗೇರಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ,ಕಾರ್ಯದರ್ಶಿ ಕುಲದೀಪ್ಸಿಂಗ್, ಜತೆ ಕಾರ್ಯದರ್ಶಿ ಧರಿತ್ರಿ , ಕ್ರೀಡಾ ಸಂಘದ ಕಾರ್ಯದರ್ಶಿ ಗುರುಪ್ರಸಾದ್ , ಜತೆಕಾರ್ಯದರ್ಶಿ ದೀಪಾಲಿ ಇವರಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ದೇವಿಪ್ರಸಾದ್ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸ್ಥೂಲವಾಗಿ ವಿವರಿಸಿದರು. ಉಪನ್ಯಾಸಕಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಮಾಧವಿ ಪಟೇಲ್ ಸ್ವಾಗತಿಸಿ ಯಶವಂತಿ ವಂದಿಸಿದರು.