ತನ್ನ ಪಾಡಿಗೆ ತಾನು ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ ಚಾಲಕನಿಗೆ ಬರೋಬ್ಬರಿ 3 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ !! |ಪೊಲೀಸ್ ಠಾಣೆ ಮೆಟ್ಟಿಲೇರಿದ ಚಾಲಕ
ತನ್ನ ಪಾಡಿಗೆ ತಾನು ಸೈಕಲ್ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ ಬಡ ರಿಕ್ಷಾಚಾಲಕನಿಗೆ ಆಘಾತಕಾರಿ ವಿಷಯವೊಂದು ನೋಟಿಸ್ ಮೂಲಕ ಮನೆಬಾಗಿಲಿಗೆ ಬಂದು ಬಿಟ್ಟಿದೆ. ಅದು ಬೇರೆ ಯಾವುದೇ ನೋಟಿಸ್ ಅಲ್ಲ, ಆದಾಯ ತೆರಿಗೆ ಇಲಾಖೆಯ ನೋಟಿಸ್!!
ಹೌದು, ಉತ್ತರ ಪ್ರದೇಶದ ಬಡ ಸೈಕಲ್ ರಿಕ್ಷಾ ಚಾಲಕರೊಬ್ಬರಿಗೆ ಬರೋಬ್ಬರಿ 3 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವ ಅಚ್ಚರಿದಾಯಕ ಘಟನೆ ನಡೆದಿದೆ.
ಈ ವಿಚಾರವಾಗಿ ಸೈಕಲ್ ರಿಕ್ಷಾ ಚಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಹೆಸರಿನ ಸೈಕಲ್ ರಿಕ್ಷಾ ಚಾಲಕ ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ.
ಈ ಕುರಿತು ಪ್ರತಾಪ್ ಸಿಂಗ್ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, `ಬ್ಯಾಂಕ್‍ನವರು ಐ.ಟಿ ರಿಟರ್ನ್ ದಾಖಲೆ ಕೇಳಿದ್ದರಿಂದ ಜನ್ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದೆ. ನಂತರ ಸಂಜಯ್ ಸಿಂಗ್ ಎಂಬವರು ಪಾನ್ ಕಾರ್ಡ್ ಒಂದರ ನಕಲು ಪ್ರತಿಯನ್ನು ನೀಡಿದ್ದರು. ನಾನು ಅನಕ್ಷರಸ್ಥನಾದ್ದರಿಂದ ಮೂಲ ಪಾನ್‍ಕಾರ್ಡ್ ಹಾಗೂ ನನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯಲಿಲ್ಲ’ ಎಂದು ಹೇಳಿದ್ದಾರೆ.
ಆದರೆ 3,47,54,896 ರೂ. ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ಆ ಬಗ್ಗೆ ವಿಚಾರಿಸಿದಾಗ ಯಾರೋ ನಿಮ್ಮನ್ನು ಯಾಮಾರಿಸಿ ಜಿಎಸ್‍ಟಿ ಸಂಖ್ಯೆ ಪಡೆದಿದ್ದಾರೆ. 2018-2019ರಲ್ಲಿ ಅವರ ವಹಿವಾಟು 43,44,36,201 ರೂ. ಆಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರಲ್ಲದೆ, ಎಫ್‍ಐಆರ್ ದಾಖಲಿಸುವಂತೆ ಸಲಹೆ ನೀಡಿದರು ಎಂದು ರಿಕ್ಷಾ ಚಾಲಕ ತನಗಾದ ವಂಚನೆ ಕುರಿತು ಹೇಳಿಕೊಂಡಿದ್ದಾರೆ.
ದೂರು ಕುರಿತು ಪ್ರತಿಕ್ರಿಯಿಸಿರುವ ಠಾಣೆ ಅಧಿಕಾರಿ, ಸದ್ಯ ಪ್ರತಾಪ್ ಸಿಂಗ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿಲ್ಲ. ಸಮಸ್ಯೆ ಕುರಿತು ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ | ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್ಯಾಸ್ ಪಿಂಟೋ ಬಂಧನ