ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ವಿಮಾ ಸುರಕ್ಷೆ | ವಿನೂತನ ವಿಮಾ ಯೋಜನೆಗೆ ಮುಂದಾದ ಸ್ಟಾರ್ ಹೆಲ್ತ್ & ಅಲೈಡ್ ಇನ್ಸೂರೆನ್ಸ್ ಸಂಸ್ಥೆ
ಮಗು ಹುಟ್ಟುವ ಮುನ್ನವೇ ಮಗುವಿನ ಸಂಭಾವ್ಯ ಜನ್ಮಜಾತ ದೋಷಗಳಿಗೆ ಮತ್ತು ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆ ಸಂಬಂಧಿ ಸಮಸ್ಯೆಗಳಿಗಾಗಿ ವಿಮಾ ಸುರಕ್ಷೆ ಒದಗಿಸಲು ಪ್ರಮುಖ ವಿಮಾ ಕಂಪನಿಯೊಂದು ಒಪ್ಪಿಕೊಂಡಿದೆ.
ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ (ಐಎಪಿಎಸ್) ಸಂಘಟನೆ ವಿಮಾ ಕಂಪೆನಿಗಳ ಜತೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂಪೆನಿ ಈ ವಿನೂತನ ವಿಮಾ ಸುರಕ್ಷೆಗೆ ಒಪ್ಪಿಕೊಂಡಿದೆ. ಇತರ ಹಲವು ವಿಮಾ ಕಂಪೆನಿಗಳ ಜತೆ ಕೂಡಾ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
”ಬಹುತೇಕ ವಿಮಾ ಕಂಪೆನಿಗಳು ಜನ್ಮಜಾತ ದೋಷಗಳಿಗೆ ಅಥವಾ ಶೈಶವಾವಸ್ಥೆಯ ಶಸ್ತ್ರಚಿಕಿತ್ಸಾ ಸಂಬಂಧಿ ಸಮಸ್ಯೆಗಳಿಗೆ ಸುರಕ್ಷೆ ನೀಡುವುದಿಲ್ಲ. ಇದು ಹೊಸದಾಗಿ ಉದ್ಯೋಗ ಆರಂಭಿಸಿದ ಅಥವಾ ತಾವು ಇಚ್ಛಿಸಿದ ಆಸ್ಪತ್ರೆಗಳಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ಬಯಸುವ ಪೋಷಕರ ಕುಟುಂಬಗಳಿಗೆ ದೊಡ್ಡ ಹಣಕಾಸು ಹೊರೆಯಾಗಿ ಪರಿಣಮಿಸಿದೆ’ ಎಂದು ಐಎಪಿಎಸ್ ಅಧ್ಯಕ್ಷ ಡಾ.ರವೀಂದ್ರ ರಾಮದ್ವಾರ ಹೇಳಿದ್ದಾರೆ.
ದೇಶದಲ್ಲಿ ಪ್ರತಿ ವರ್ಷ ಕನಿಷ್ಠ 17 ಲಕ್ಷ ಮಕ್ಕಳು ಜನ್ಮಜಾತ ದೋಷಗಳೊಂದಿಗೆ ಜನಿಸುತ್ತಿದ್ದಾರೆ.
ವಿಮಾ ಸುರಕ್ಷೆ ಇಲ್ಲದ್ದರಿಂದ ಚಿಕಿತ್ಸಾ ವೆಚ್ಚ ಅತ್ಯಧಿಕವಾಗುತ್ತದೆ ಎಂಬ ಕಾರಣಕ್ಕೆ ಇದು ಪೋಷಕರ ಹತಾಶೆಗೆ ಕಾರಣವಾಗುತ್ತದೆ. ಇಂಥ ಮಕ್ಕಳಿಗೆ ಸೂಕ್ತ ವಿಮಾ ಸುರಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ವೇಳೆ ಮಗುವಿಗೆ ಸಣ್ಣ ದೋಷ ಇದೆ ಎಂದು ಕಂಡುಬಂದರೂ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಾರೆ.
ಈ ಪುಟ್ಟ ಮಕ್ಕಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ನಿಟ್ಟಿನಲ್ಲಿ ಕಂಪೆನಿ ಹೊಸ ಪಾಲಿಸಿಯನ್ನು ಬಿಡುಗಡೆ ಮಾಡಿದೆ. ಇದರಡಿ ಪೋಷಕರು ಎರಡು ವರ್ಷಗಳಿಂದ ವಿಮೆ ಮಾಡಿಸಿಕೊಂಡಿದ್ದರೆ, ಹುಟ್ಟುವ ಮಗುವಿನ ಜನ್ಮದೋಷಗಳಿಗೆ ಕೂಡಾ ವಿಮಾ ಸುರಕ್ಷೆ ಪಡೆಯುತ್ತಾರೆ ಎಂದು ಸ್ಟಾರ್ ಹೆಲ್ತ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪ್ರಕಾಶ್, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಜತೆಗಿನ ಆನ್‌ಲೈನ್ ಸಮ್ಮೇಳನದಲ್ಲಿ ವಿವರಿಸಿದರು.