ಇಂದಿನಿಂದ ಮತ್ತೆ ಶಾಲಾರಂಭ | ಬಿಸಿಯೂಟ ,ಕ್ಷೀರಾ ಭಾಗ್ಯ ಯೋಜನೆಯೂ ಆರಂಭ
ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿದ ಬಳಿಕ ಪ್ರಾರಂಭಗೊಂಡಿದ್ದ ಶಾಲೆ, ಕಾಲೇಜಿನ ಭೌತಿಕ ತರಗತಿಗಳಿಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಜೆ ಸಾರಲಾಗಿತ್ತು. ಇದೀಗ ರಜೆ ಮುಗಿದ ಕಾರಣ ಅ.21ರಿಂದ ಎಂದಿನಂತೆ ತರಗತಿ ನಡೆಯಲಿದೆ.
ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯೂ ಅ.21ರಿಂದ ಪುನಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಶಾಲೆಗಳಲ್ಲಿ ಅಡುಗೆ ಮನೆ ಸ್ವಚ್ಛತಾ ಕಾರ್ಯ, ಆಹಾರ ಧಾನ್ಯಗಳ ದಾಸ್ತಾನು ಪರಿಶೀಲನೆ ಇತ್ಯಾದಿ ನಡೆಯುತ್ತಿದೆ.
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅ.21ರಿಂದ ಪೂರ್ಣ ಪ್ರಮಾಣದ ತರಗತಿಯ ಜತೆಗೆ ಬಿಸಿಯೂಟ, ಕ್ಷೀರಭಾಗ್ಯದ ಹಾಲು ದೊರೆಯಲಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಅ.25ರಿಂದ ತರಗತಿಗಳು ಆರಂಭವಾದರೂ ನ.2ರಿಂದ ಬಿಸಿಯೂಟ ಹಾಗೂ ಕ್ಷೀರಭಾಗ್ಯದ ಹಾಲು ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಅ.18ರಿಂದ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಆದರೆ ಮಂಗಳೂರು ವಿವಿ ಅಧೀನದಲ್ಲಿರುವ ಪದವಿ ಕಾಲೇಜುಗಳಲ್ಲಿ ಈಗಾಗಲೇ ಪರೀಕ್ಷೆ ನಡೆಯುತ್ತಿದ್ದು, ನ.2ರ ಬಳಿಕ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.