ಕಿಡ್ನಿಯಲ್ಲಿದ್ದ ಕಲ್ಲನ್ನು ತೆಗೆಯುವ ಬದಲು ವೈದ್ಯರು ಎಡ ಕಿಡ್ನಿಯನ್ನೇ ಕಿತ್ತ ಪ್ರಕರಣ| ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕುಟುಂಬಸ್ಥರಿಗೆ ನೀಡಿದ ಪರಿಹಾರದ ಮೊತ್ತ ಎಷ್ಟು ಗೊತ್ತಾ?
ಕಿಡ್ನಿಯಲ್ಲಿದ್ದ ಕಲ್ಲನ್ನು ತೆಗೆಯುವ ಬದಲು ವೈದ್ಯರು ತಪ್ಪಾಗಿ ಎಡ ಕಿಡ್ನಿಯನ್ನೇ ಕಿತ್ತ ಪ್ರಕರಣ ಸಂಬಂಧ ತೀರ್ಪು ನೀಡಿದ ಗುಜರಾತ್ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೃತ ರೋಗಿಯ ಕುಟುಂಬಸ್ಥರಿಗೆ 11.23 ಲಕ್ಷ ರೂಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ಬಲನಿಸೋರ್ನ ಕೆಎಂಜಿ ಆಸ್ಪತ್ರೆಗೆ ಆದೇಶ ನೀಡಿದೆ.
ದೇಹದಲ್ಲಿನ ಪ್ರಮುಖ ಅಂಗವನ್ನೇ ವೈದ್ಯರು ಕಿತ್ತ ಪರಿಣಾಮ ರೋಗಿಯು ನಾಲ್ಕೇ ತಿಂಗಳಲ್ಲಿ ಸಾವನ್ನಪ್ಪಿದ್ದರು.ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯು ಹೊಣೆಯನ್ನು ಹೊರಲೇಬೇಕಿದೆ. ಈ ಅಸಹ್ಯಕರ ಕೃತ್ಯಗಳಲ್ಲಿ ಆಸ್ಪತ್ರೆಯು ತನ್ನ ಸಿಬ್ಬಂದಿಯ ನಿರ್ಲಕ್ಷ್ಯಕ್ಕೂ ಜವಾಬ್ದಾರಿಯಾಗಿರುತ್ತದೆ. 2012ರಿಂದ 7.5 ಪ್ರತಿಶತ ಬಡ್ಡಿದರದಂತೆ ಆಸ್ಪತ್ರೆಯು 11.23 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಆಯೋಗ ಆದೇಶಿಸಿದೆ.
ಘಟನೆಯ ವಿವರ:
ಖೇಡಾ ಜಿಲ್ಲೆಯ ವಂಘ್ರೋಲಿ ಗ್ರಾಮದ ದೇವೇಂದ್ರ ಭಾಯಿ ರಾವಲ್ ಎಂಬವರು ಬಾಲಸಿನೋರ್ ಪಟ್ಟಣದಲ್ಲಿದ್ದ ಕೆಎಂಜಿ ಜನರಲ್ ಆಸ್ಪತ್ರೆ ವೈದ್ಯ ಡಾ. ಶಿವುಭಾಯಿ ಪಟೇಲ್ ರನ್ನು ಭೇಟಿಯಾಗಿ ತಮಗೆ ತೀವ್ರ ಬೆನ್ನು ನೋವು ಹಾಗೂ ಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತಿರುವುದರ ಬಗ್ಗೆ ವಿವರಿಸಿದ್ದರು.
2011ರ ಮೇ ತಿಂಗಳಲ್ಲಿ ದೇವೇಂದ್ರ ಕಿಡ್ನಿಯಲ್ಲಿ 14 ಎಂಎಂ ಕಲ್ಲು ಇದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಒಳ್ಳೆಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ದೇವೇಂದ್ರನಿಗೆ ಸಲಹೆ ನೀಡಿದ್ದರು. ಆದರೆ ದೇವೇಂದ್ರ ಕೆಎಂಜಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಒಳಗಾಗುವುದಾಗಿ ಹೇಳಿದ್ದರು.ಅದರಂತೆ 2011ರ ಸೆಪ್ಟೆಂಬರ್ 3ರಂದು ದೇವೇಂದ್ರರಿಗೆ ಚಿಕಿತ್ಸೆ ಮಾಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯಲ್ಲಿ ಕಲ್ಲಿನ ಬದಲು ಮೂತ್ರಪಿಂಡವನ್ನು ತೆಗೆದಿದ್ದರು. ರೋಗಿಯ ಹಿತದೃಷ್ಟಿಯಿಂದ ಈ ರೀತಿ ಮಾಡಿದ್ದಾಗಿ ವೈದ್ಯರು ಕುಟುಂಬಸ್ಥರಿಗೆ ಸಬೂಬು ನೀಡಿದ್ದರು.
ಇದಾದ ಬಳಿಕ ರಾವಲ್ಗೆ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಮತ್ತಷ್ಟು ಹೆಚ್ಚಾಯಿತು.ಬಳಿಕ ಅವರನ್ನು ನದಿಯಾದ್ನ ಕಿಡ್ನಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ರಾವಲ್ ಸ್ಥಿತಿ ಗಂಭೀರವಾಗುತ್ತಲೇ ಹೋಯ್ತು. ಹೀಗಾಗಿ ಅವರನ್ನು ಅಹಮದಾಬಾದ್ನ ಐಕೆಡಿಆರ್ಸಿಗೆ ದಾಖಲಿಸಲಾಯ್ತು. ಆದಾಗ್ಯೂ 2012ರ ಜನವರಿ 8ರಂದು ರಾವಲ್ ಸಾವನ್ನಪ್ಪಿದ್ದರು.