ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ | ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ನತ್ತ ಮೊರೆಯಿಟ್ಟ ರೈತ !!

ಈಗಿನ ಮದುವೆಗಳಲ್ಲಿ ಡ್ರೋನ್ ಚಿತ್ರೀಕರಣ ಮಾಮೂಲಾಗಿದೆ. ಡ್ರೋನ್ ಮೂಲಕ ಸೆರೆಹಿಡಿಯುವ ಫೋಟೋಶೂಟ್ ಗಳಿಗೆ ತುಂಬಾನೇ ಬೇಡಿಕೆಯಿದೆ. ವೀಡಿಯೋ ಚಿತ್ರೀಕರಣ ಸೇರಿದಂತೆ ಇತ್ತೀಚೆಗೆ ಹಲವು ಕ್ಷೇತ್ರಗಳಲ್ಲಿ ಡ್ರೋನ್ ಗಳ ಬಳಕೆ ಯಶಸ್ವಿಯಾಗಿ ಸಾಗುತ್ತಿದೆ. ಅದೇ ರೀತಿ ಈಗ ಕೃಷಿ ಕ್ಷೇತ್ರದಲ್ಲೂ ಡ್ರೋನ್ ಗಳ ಬಳಕೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಸುತ್ತಮುತ್ತಲು ರೈತರ ಜಮೀನಿನಲ್ಲಿ ಡ್ರೋನ್ ಗಳು ಕಮಾಲ್ ಮಾಡುತ್ತಿದ್ದು, ರೈತ ಶ್ರೀನಿವಾಸ್ ಎಂಬವರು ಡ್ರೋನ್ ಮೂಲಕ ತಮ್ಮ ಆಲೂಗಡ್ಡೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದಾರೆ. ಇದನ್ನು ಕಂಡ ಸುತ್ತಮುತ್ತಲಿನ ರೈತರು ಸಹ ಈಗ ಡ್ರೋನ್ ಮೊರೆ ಹೋಗಿದ್ದಾರೆ. ಒಂದೆಡೆ ಕೂಲಿಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನುರಿತ ಕಾರ್ಮಿಕರ ಅಲಭ್ಯ. ಯಾಮಾರಿ ಕ್ರಿಮಿನಾಶಕ ಹೊಟ್ಟೆ ಸೇರಿದರೆ ಆಪತ್ತು. ಅಗತ್ಯಕ್ಕಿಂತ ಅನಗತ್ಯವಾಗಿ ಖರ್ಚಾಗುವ ಔಷಧಿ, ಇವೆಲ್ಲದಕ್ಕೂ ಪರಿಹಾರ ಎಂಬಂತೆ, ಈಗ ವಿನೂತನ ಮಾದರಿಯ ಡ್ರೋನ್ ಗಳ ಮೂಲಕ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.

ಮೊದಲ ಬಾರಿಗೆ ಪ್ರಯೋಗ!

ಖಾಸಗಿ ಕ್ರಿಮಿನಾಶಕ ತಯಾರಿಕಾ ಸಂಸ್ಥೆಯೊಂದು, ಬಾಡಿಗೆ ಆಧಾರದ ಮೇಲೆ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುತ್ತಿದೆ. ಒಂದು ಎಕರೆ ಜಮೀನಿನಲ್ಲಿರುವ ಬೆಳೆಗೆ ಕೇವಲ 7 ರಿಂದ 10 ನಿಮಿಷದಲ್ಲಿ, ಔಷಧಿ ಸಿಂಪಡಣೆ ಮಾಡುತ್ತದೆ. ಅದರಲ್ಲೂ ಈ ಡ್ರೋನ್ ಸಹಾಯದಿಂದ ಔಷಧಿ ವ್ಯರ್ಥವಾಗದ ಹಾಗೆ ಬೆಳೆಗಳ ಮೇಲೆ ಔಷಧಿ ಸಿಂಪಡಿಸುತ್ತದೆ. ಇದರಿಂದ ರೈತರ ವಿವಿಧ ಸಮಸ್ಯೆಗಳಿಗೆ ಡ್ರೋನ್ ಗಳು ರೈತಮಿತ್ರವಾಗುತ್ತಿವೆ.

ಅಸಲಿಗೆ ಡ್ರೋನ್ ಗಳಲ್ಲಿ 6 ಮಾಡೆಲ್ ಗಳಿವೆ. 10 ಲೀಟರ್ ಸಾಮಥ್ರ್ಯದ ಡ್ರೋನ್, 16 ಲೀಟರ್ ಸಾಮಥ್ರ್ಯದ ಹೈಬ್ರಿಡ್ ಡ್ರೋನ್, 21 ಲೀಟರ್ ಸಾಮಥ್ರ್ಯದ ಡ್ರೋನ್ ಸೇರಿದಂತೆ, 22 ಕೆಜಿ ಹೊತ್ತು ಹಾರಾಡಬಲ್ಲ ಡ್ರೋನ್ ಗಳಿವೆ. ಡ್ರೋನ್ ಅಡಿ ಭಾಗದಲ್ಲಿ ಟ್ಯಾಂಕ್ ಒಂದನ್ನು ಅಳವಡಿಸಿದ್ದು, ಅದಕ್ಕೆ ಸ್ಪ್ರೇಯರ್ ಪಂಪ್ ಅಳವಡಿಸಲಾಗಿದೆ. ಬೆಳೆಗೆ ತಕ್ಕ ಎತ್ತರಕ್ಕೆ ಸೀಮಿತವಾಗಿ, ಡ್ರೋನ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಡ್ರೋನ್ ನಲ್ಲಿ ಜಿಪಿಎಸ್ ಇದೆ. ಜಮೀನಿನ ಮ್ಯಾಪ್ ನ್ನು ಡ್ರೋನ್ ಗೆ ಅಳವಡಿಸಿದ್ರೆ ಅದು ಆ ಜಮೀನು ಬಿಟ್ಟು ಅಕ್ಕಪಕ್ಕದ ಜಮೀನಿಗೆ ಹೋಗಲ್ಲ ಎಂದು ಖಾಸಗಿ ಸಂಸ್ಥೆಯ ಡ್ರೋನ್ ನಿರ್ವಾಹಕರೊಬ್ಬರು ಹೇಳುತ್ತಾರೆ .

ರೈತ ಮಿತ್ರ ಡ್ರೋನ್

ರೈತ ಸ್ನೇಹಿಯಾಗಿ ಡ್ರೋನ್ ಬಳಕೆಯಾಗುತ್ತಿದ್ದು, ಉದಾಹರಣೆಗೆ ಒಂದು ಎಕೆರೆ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಇಬ್ಬರು ಮೂವರು ಕೂಲಿಯಾಳುಗಳ ಅಗತ್ಯ ಹಾಗೂ ಗಂಟೆಗಟ್ಟಲೇ ಸಮಯ ಸೇರಿದಂತೆ ಕ್ರಿಮಿನಾಶಕ ಸಿಂಪಡಿಸುವಾಗ ಕ್ರೀಮಿನಾಶಕ ಉಸಿರಾಟದ ಮೂಲಕ ದೇಹದೊಳಗೆ ಹೋಗುವ ಸಾಧ್ಯತೆ ಹೆಚ್ಚು ಇರುತ್ತಾದೆ. ಇದು ದೇಹಕ್ಕೆ ಅಪಾಯ. ಇದರ ನಡುವೆ ಮಳೆ ಬಂದಾಗ ತೋಟದೊಳಗೆ ಕಾಲಿಡಲು ಸಾಧ್ಯವಾಗದೆ ಕ್ರಿಮಿನಾಶಕ ಸಿಂಪಡಣೆ ಮಾಡದಿದ್ರೆ, ಎರಡು ಮೂರು ದಿನದಲ್ಲಿ ಇಡೀ ತೋಟಕ್ಕೆ ಕ್ರಿಮಿ ಕೀಟಗಳು ಭಾದಿಸಬಹುದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಡ್ರೋನ್ ಕಾರ್ಯ ನಿರ್ವಹಿಸಲಿದೆ. ಡ್ರೋನ್ ನಮಗೆ ಸಹಕಾರಿಯಾಗಿದೆ ಎಂದು ಸಾದಲಿ ಗ್ರಾಮದ ರೈತರೊಬ್ಬರು ತಿಳಿಸಿದ್ದಾರೆ.

1 ಎಕರೆಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲು 500 ರೂ. ದರ ನಿಗದಿಪಡಿಸಿಲಾಗಿದ್ದು, ಮೊದಲೇ ಒಂದು ದಿನಕ್ಕೆ 40 ರಿಂದ 50 ಎಕರೆ ತೋಟಗಳನ್ನು ಗುರುತು ಮಾಡಿಕೊಂಡು ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡಿಸಲಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

ಅನುಮತಿ ಸಿಕ್ಕಿದೆ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. 200 ಮೀಟರ್ ಎತ್ತರದ ವರೆಗೂ ಹಸಿರುವಲಯದಲ್ಲಿ ಡ್ರೋನ್ ಗಳು ಹಾರಾಟ ನಡೆಸಬಹುದಾಗಿದೆ. ಆದರೆ ರೆಡ್ ಜೋನ್, ಯಲ್ಲೋ ಜೋನ್, ಸೇರಿದಂತೆ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಗಳ ಹಾರಾಟ ಮಾಡುವಂತಿಲ್ಲ. ಸದ್ಯ ಕೃಷಿಯಲ್ಲಿ ಡ್ರೋನ್ ಬಳಕೆಯಾಗುತ್ತಿದ್ದು, ಡ್ರೋನ್ ಕಾರ್ಯಕ್ಕೆ ರೈತರು ಫಿದಾ ಆಗಿದ್ದಾರೆ.

ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ನ ಬಳಕೆ ತುಂಬಾ ಉಪಕಾರಿಯಾಗಿದೆ. ಅದಲ್ಲದೆ ರೈತರು ತಮ್ಮ ಆರೋಗ್ಯ ಸಮಸ್ಯೆಗೊಳಗಾಗದೆ ಹಾಗೂ ಸಮಯವನ್ನು ಕೂಡ ಉಳಿಸಬಹುದು. ಕೃಷಿ ಕ್ಷೇತ್ರದಲ್ಲಿ ಈ ರೀತಿಯ ಪ್ರಯೋಗಗಳು ಹೊಸ ಕ್ರಾಂತಿಯನ್ನೇ ನಿರ್ಮಿಸಲಿದೆ.

Leave A Reply

Your email address will not be published.