ಭಾರೀ ಮಳೆ ಪ್ರವಾಹಕ್ಕೆ ಉತ್ತರಾಖಂಡ್ ತತ್ತರ; 23 ಜನರ ಸಾವು, 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ, ಹಲವರು ನಾಪತ್ತೆ!
ಇತಿಹಾಸ ಕಾಣದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಉತ್ತಾರಾಖಂಡ್ ರಾಜ್ಯ ಅಕ್ಷರಶಃ ನಲುಗಿದೆ. ಉತ್ತರಾಖಂಡ್ ಸಾಮಾನ್ಯವಾಗಿ ಅನೇಕ ಗುಡ್ಡಗಾಡುಗಳ ರಾಜ್ಯವಾಗಿದ್ದು, ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯ ರೌದ್ರಾವತಾರಕ್ಕೆ ಸಿಲುಕಿ 23 ಜನ ಸಾವನ್ನಪ್ಪಿದ್ದಾರೆ, 100ಕ್ಕೂ ಅಧಿಕ ಪ್ರವಾಸಿಗಳನ್ನು ರಕ್ಷಿಸಲಾಗಿದೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ವ್ಯಾಪಕ ಮಳೆಯಿಂದಾಗಿ ರಸ್ತೆ ಮತ್ತು ಕಟ್ಟಡಗಳು ಹಾಳಾಗಿವೆ. ಸಂಪರ್ಕ ರಹಿತ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು, ಸ್ಥಳೀಯರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ಜೀವ ಕೈಲಿ ಹಿಡಿದು ಕುಳಿತಿರುವ ಜನರನ್ನು ರಕ್ಷಿಸುವ ಕೆಲಸಕ್ಕೆ ರಕ್ಷಣಾ ಪಡೆಗಳನ್ನೂ ನಿಯೋಜಿಸಲಾಗಿದೆ.ಮಳೆ ಮತ್ತು ಪ್ರವಾಹದಿಂದಾಗಿ ನೇಪಾಳದಿಂದ ಬಂದಿದ್ದ ಮೂವರು ಕಾರ್ಮಿಕರು ಸೇರಿದಂತೆ ಐವರು ದುರ್ಮರಣ ಹೊಂದಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.
ಪೌರಿ ಜಿಲ್ಲೆಯ ಲ್ಯಾನ್ಸ್ಡೌನ್ ಬಳಿ ಕಾರ್ಮಿಕರು ಉಳಿದುಕೊಂಡಿದ್ದು, ಪ್ರವಾಹದಿಂದಾಗಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಕುಮಾರ್ ಜೋಗ್ದಾಂಡೆ ತಿಳಿಸಿದ್ದಾರೆ ಎಂದು ಎನ್ಡಿಟಿವಿ ಹೇಳಿದೆ. ಛಂಪಾವತ್ ಜಿಲ್ಲೆಯಲ್ಲಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವು ನೀರಿನ ಏರಿಕೆಯಿಂದಾಗಿ ಕುಸಿದುಬಿದ್ದಿದೆ ಎಂದು ತಿಳಿದುಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರೊಂದಿಗೆ ಪರಿಸ್ಥಿತಿಯ ಅವಲೋಕನಕ್ಕಾಗಿ ಇಂದು ಮಾತನಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಾಯವನ್ನು ನೀಡುವುದಾಗಿ ತಿಳಿಸಿದ್ದಾರೆ.ಪ್ರವಾಹದ ಭೀಕರತೆಯನ್ನು ತೋರುವ ಚಿತ್ರಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಉತ್ತರಖಾಂಡ್ನ ಐಕಾನಿಕ್ ನೈನಿತಾಲ್ ಸರೋವರ ತುಂಬಿ ಹರಿದಿದ್ದು, ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿರುವ ವಿಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ನೀರು ಮೊಣಕಾಲಿನಷ್ಟು ಆಳವಾಗಿದೆ ಮತ್ತು ಹೆಚ್ಚಿನ ವೇಗದಲ್ಲಿ ಹರಿಯುತ್ತದೆ; ರಾಜ್ಯದ ವಿಪತ್ತು ನಿರ್ವಹಣಾ ತಂಡಗಳು ಕೂಡ ಕಾರ್ಯಪ್ರವೃತ್ತವಾಗಿವೆ. ಮಂಗಳವಾರ ಬೆಳಿಗ್ಗೆ ಕೇದಾರನಾಥ ದೇವಸ್ಥಾನದಿಂದ ಹಿಂತಿರುಗುವಾಗ ಸಿಲುಕಿದ್ದ 22 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ.”ಹಿಮಾಲಯನ್ ದೇವಸ್ಥಾನಗಳಿಗೆ ವಾಹನಗಳ ತೆರಳದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಂದ್ರಭಾಗ ನದಿಯ ಮೇಲಿನ ಸೇತುವೆಯನ್ನು ವಾಹನಗಳುದಾಟುವಂತಿಲ್ಲ ಎಂದು ಎಚ್ಚರಿಸಲಾಗಿದೆ. ತಪೋವನ್, ಲಕ್ಷ್ಮಣ ಜೂಲ ಮತ್ತು ಮುನಿ-ಕಿ-ರೆತಿ ಭದ್ರಕಾಳಿ ತಡೆಗೋಡೆಗಳನ್ನು ದಾಟುವಂತಿಲ್ಲ” ಎಂದು ಸರ್ಕಾರ ಸೂಚಿಸಿದೆ
.ಕಳೆದ 48 ಗಂಟೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಮೋಲಿ ಜಿಲ್ಲೆಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ಮುಂಜಾಗ್ರತಾ ಕ್ರಮವಾಗಿ ಬದರಿನಾಥ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸ ಲಾಗಿದೆ. ಬದರಿನಾಥ ದೇವಸ್ಥಾನಕ್ಕೆ ಹೋಗುವ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಹವಾಮಾನ ಯಥಾಸ್ಥಿತಿಗೆ ಮರಳುವ ತನಕ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಮುಖ್ಯಮಂತ್ರಿಯವರು ಯಾತ್ರಾರ್ಥಿಗಳಿಗೆ ಮನವಿ ಮಾಡಿದ್ದಾರೆ.