ಬೆಳ್ತಂಗಡಿ | ನಾಪತ್ತೆಯಾಗಿದ್ದ ಬಾಲಕ ಶವವಾಗಿ ಫಲ್ಗುಣಿ ನದಿಯಲ್ಲಿ ಪತ್ತೆ
ನಿನ್ನೆ ನಾಪತ್ತೆಯಾಗಿದ್ದ ಬಾಲಕ ಇಂದು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಮೊರಂತಕಾಡು ಸೇತುವೆ ಬಳಿ ನಡೆದಿದೆ.
ಮೃತ ಬಾಲಕನನ್ನು ಮಾರ್ಟಿನ್ ಪಿಂಟೋ (15) ಎಂದು ಗುರುತಿಸಲಾಗಿದೆ.
ಮೃತ ಬಾಲಕನ ತಾಯಿ ಹೆಲನ್ ಪಿಂಟೋ ಅವರು ಮಾರ್ಟಿನ್ ಪಿಂಟೋ ಮತ್ತು ಮೆಲ್ ರಾಯ್ ಪಿಂಟೋ ಎಂಬ ಮಕ್ಕಳೊಂದಿಗೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಿಂಟೋ ನಗರ ಎಂಬಲ್ಲಿ ವಾಸವಾಗಿದ್ದು, ಗಂಡ ಮೆಲ್ವಿನ್ ಪಿಂಟೋ ವಿದೇಶದಲ್ಲಿದ್ದರು. ಮಗ ಮಾರ್ಟಿನ್ ಪಿಂಟೋ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ.
ನಿನ್ನೆ ಮಧ್ಯಾಹ್ನ ಹೆಲನ್ ಪಿಂಟೋ ಅವರು ನೆರೆಮನೆಯ ಮೆಲ್ವಿನ್ ರೋಡ್ರಿಗಸ್ ಮತ್ತು ಸೆಲಿನ್ ರೋಡ್ರಿಗಸ್ ಅವರೊಂದಿಗೆ ಮೂಡಬಿದ್ರೆಯ ಆಸ್ಪತ್ರೆಗೆ ಹೋಗಿದ್ದರು. ಬಳಿಕ ಅಲ್ಲಿಂದ ವಾಪಸ್ಸು ಮನೆಗೆ ಬಂದಾಗ ಮನೆಯಲ್ಲಿದ್ದ ಮಾರ್ಟಿನ್ ಪಿಂಟೋ ಕಾಣೆಯಾಗಿದ್ದು, ಇನ್ನೊಬ್ಬ ಮಗ ಮಾತ್ರ ಮನೆಯಲ್ಲಿ ಇದ್ದನು.
ಈ ಬಗ್ಗೆ ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ಮನೆಯ ಸಮೀಪದ ಮೊರಂತಕಾಡು ಸೇತುವೆ ಕೆಳಗಿರುವ ಮುರಿದ ಹಳೆಯ ಸೇತುವೆ ಬಳಿ ಕಾಣೆಯಾದ ಬಾಲಕನ ಶರ್ಟ್,ಬೈರಸು ಮತ್ತು ಚಪ್ಪಲಿ ಪತ್ತೆಯಾಗಿದೆ. ಅಲ್ಲದೇ ಮನೆಯಲ್ಲಿ ಬಟ್ಟೆ ಒಣಗಲು ಹಾಕುವ ನೈಲಾನ್ ದಾರವನ್ನು ಹೊಳೆಯ ನೀರಿನಲ್ಲಿರುವ ಗಿಡಕ್ಕೆ ಕಟ್ಟಿದ್ದು ಅದರ ಇನ್ನೊಂದು ತುದಿ ಸೇತುವೆ ಮೇಲೆ ಇತ್ತು.
ಮಗ ಕಾಣೆಯಾಗಿರುವ ಬಗ್ಗೆ ತಂದೆ ಮೆಲ್ವಿನ್ ಪಿಂಟೋ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಶೋಧ ನಡೆಸಿದಾಗ, ಬಾಲಕನ ಮನೆ ಸಮೀಪವಿರುವ ಫಲ್ಗುಣಿ ನದಿಯಲ್ಲಿ ಇಂದು ಮೃತದೇಹ ಪತ್ತೆಯಾಗಿದೆ.