ಪ್ರವಾಹದ ನಡುವೆಯೂ ವಿವಾಹವಾಗಲು ಪಾತ್ರೆಯ ಮೇಲೆ ಕುಳಿತು ದೇವಸ್ಥಾನ ತಲುಪಿದ ನವ ವಧು-ವರರು | ಮಳೆಯೇ ಬರಲಿ, ಪ್ರವಾಹವೇ ಇರಲಿ ಮದುವೆಯಾಗುವುದು ನಿಶ್ಚಿತ ಎಂದು ಪಟ್ಟು ಹಿಡಿದ ಜೋಡಿ
ಕಳೆದ ಎರಡು ದಿನಗಳಿಂದ ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಮನೆ ಮಠಗಳಿಗೆ ನೀರು ನುಗ್ಗಿದೆ. ಬಹುತೇಕರ ಜೀವನ ಬಹಳ ಸಂಕಷ್ಟಕ್ಕೆ ಈಡಾಗಿದೆ.
ಇಂತಹ ಪ್ರವಾಹದ ಸಮಯದಲ್ಲಿ ಆಲಪ್ಪುಜಾದಲ್ಲಿ ಒಂದು ಮದುವೆ ನಡೆದಿದೆ. ಯುವ ಜೋಡಿಗಳಾದ ಆಕಾಶ್ ಮತ್ತು ಐಶ್ವರ್ಯ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅಚ್ಚರಿ ವಿಚಾರವೆಂದರೆ ಪ್ರವಾಹದ ನಡುವೆಯೇ ಪಾತ್ರೆಯೊಂದರ ಮೇಲೆ ಕುಳಿತುಕೊಂಡು ದೇವಸ್ಥಾನ ತಲುಪಿ ಆ ಬಳಿಕ ಇಬ್ಬರು ವಿವಾಹವಾಗುವ ಮೂಲಕ ಒಂದಾಗಿದ್ದಾರೆ. ಸದ್ಯ ಈ ಮ್ಯಾರೇಜ್ ಸ್ಟೋರಿ ವೈರಲ್ ಆಗಿದೆ.
ಆಕಾಶ್ ಮತ್ತು ಐಶ್ವರ್ಯ ಈ ಮೊದಲು ಕುಟುಂಬ ಸಮ್ಮುಖದಲ್ಲಿ ಅಕ್ಟೋಬರ್ 18ರಂದು ತಮ್ಮ ವಿವಾಹ ನಿಗದಿ ಪಡಿಸಿಕೊಂಡಿದ್ದರು. ಆದರೆ ಕೇರಳದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದ್ದು, ಕೆಲವೆಡೆ ಪ್ರವಾಹ ಎದುರಾಗಿತ್ತು. ಯುವ ಜೋಡಿಗಳಿದ್ದ ಆಲಪ್ಪುಜಾ ತಲವಾಡಿಯಲ್ಲೂ ರಸ್ತೆಯೆಲ್ಲಾ ಜಲಾವೃತಗೊಂಡಿತ್ತು. ಆದರೆ ಆಕಾಶ್ ಮತ್ತು ಐಶ್ವರ್ಯ ಏನೇಯಾದರು ವಿವಾಹವಾಗಬೇಕು ಎಂದುಕೊಂಡಿದ್ದರು. ಅದರಂತೆ ದೊಡ್ಡ ಪಾತ್ರೆಯೊಂದನ್ನು ಬಳಸಿಕೊಂಡು ಅಲ್ಲಿನ ಹತ್ತಿರದ ಪನಯನ್ನೂರ್ಕಾವು ದೇವಸ್ಥಾನದಲ್ಲಿ ಹೋಗಿ ವಿವಾಹವಾಗಿದ್ದಾರೆ. ಸದ್ಯ ಯುವ ಜೋಡಿ ದೊಡ್ಡ ಪಾತ್ರೆಯಲ್ಲಿ ಕುಳಿತುಕೊಂಡು ದೇವಸ್ಥಾನ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಳೆ ಬರಲಿ, ಪ್ರವಾಹವೇ ಇರಲಿ ಮದುವೆ ಆಗಲೇ ಬೇಕು ಎಂದುಕೊಂಡಿದ್ದ ಆಕಾಶ್ ಮತ್ತು ಐಶ್ವರ್ಯ ಇಂದು ವಿವಾಹವಾಗಿದ್ದಾರೆ. ಆದರೆ ಮಳೆಯಿಂದ ವಾಹನದಲ್ಲಿ ಮಂಟಪಕ್ಕೆ ತೆರಳುವುದು ತುಂಬಾ ಕಷ್ಟವಿತ್ತು. ಆ ಕಾರಣಕ್ಕೆ ನೀರಿನಲ್ಲಿ ತೇಲುವ ದೊಡ್ಡ ಪಾತ್ರೆ ಬಳಸಿಕೊಂಡ ಮಂಟಪ ಸೇರಿದ್ದಾರೆ. ಮದುವೆಯ ಸಮಯದಲ್ಲಿ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಿದ್ದರು. ವಿವಾಹದ ಬಳಿಕ ನವ ದಂಪತಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಎರಡು ದಿನ ಸುರಿದ ಮಳೆಯಲ್ಲಿ ಅಣೆಕಟ್ಟುಗಳು ವೇಗವಾಗಿ ತುಂಬುತ್ತಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಡುಕ್ಕಿ ಅಣೆಕಟ್ಟಿಗೆ ಆರೆಂಜ್ ಅಲರ್ಟ್ ಮತ್ತು ಎಡಮಲಯಾರ್ ಜಲಾಶಯಕ್ಕೆ ನೀಲಿ ಅಲರ್ಟ್ ನೀಡಲಾಗಿದೆ. ಇಂದು ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗುತ್ತಿದೆ.
ಈ ಪ್ರವಾಹದ ನಡುವೆಯೂ ಮದುವೆಯಾಗಿರುವ ಈ ಜೋಡಿಯ ಮದುವೆ ಭಾರಿ ಸದ್ದು ಮಾಡಿದೆ. ಇವರ ಫೋಟೋಗೆ ಹಲವು ಕಾಮೆಂಟ್ಗಳು ಬರಲಾರಂಭಿಸಿದೆ.