ಕಡಬ : ಕುಂತೂರಿನ ಪುರಾತನ ಕೆದ್ದೋಟೆ ಕೆರೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಸುಖೇಶ್ ಒತ್ತಾಯ
ಕಡಬ: ಕುಂತೂರು ಗ್ರಾಮದಲ್ಲಿರುವ ಪುರಾತನ ಕೆದ್ದೋಟೆ ಕೆರೆಯ ಒತ್ತುವರಿ ಆಗಿದ್ದು ಇದನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿ ಹಾಗೂ ದೇವಸ್ಥಾನ ಅಭಿವೃದ್ಧಿಪಡಿಸಬೇಕೆಂದು ಕೆದ್ದೊಟ್ಟೆ ನಿವಾಸಿ ಸುಖೇಶ್ ಎಂಬವರು ಆಗ್ರಹಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಐತಿಹಾಸಿಕ ಹಿನ್ನಲೆಯುಳ್ಳ ಕೆದ್ದೋಟೆ ಕೆರೆಯು ಸುಮಾರು 10 ಎಕ್ರೆ ಪ್ರದೇಶ ಇದ್ದು ಇದೀಗ ಕೆರೆ ಒತ್ತುವರಿ ಆಗಿ ಎರಡು ಮೂರು ಎಕ್ರೆ ಮಾತ್ರ ಇರಬಹುದು, ನಾನು ಈ ಬಗ್ಗೆ ಯಾವುದೇ ಶಾಸಕರಿಗೆ, ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಬಳಿಕ ಪ್ರಧಾನಿಯವರ ಇ-ಸ್ಪಂಧನ ಆಪ್‌ನಲ್ಲಿ ದೂರು ದಾಖಲಿಸಿದ್ದು ಬಳಿಕ ಕೆರೆಯ ಜಾಗವನ್ನು ಸರ್ವೆ ನಡೆಸಿ ಎಸ್ಟಿಮೆಟ್ ಮಾಡುವಂತೆ ಅಧಿಕಾರಿಗಳಿಗೆ ಕೆರೆ ಅಭಿವೃದ್ಧಿ ಇಲಾಖೆಯಿಂದ ಪತ್ರ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಡೆಸಿದ್ದು ಬಳಿಕ ಇಲ್ಲಿ ಕೆರೆ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳಲಾಗಿಲ್ಲ. ಸರ್ವೆ ನಡೆಸಿ ಬೇಲಿ ಹಾಕಬೇಕೆಂದು ತಿಳಿಸಲಾಗಿದ್ದರೂ ಒಳಗಿಂದ ಬೇಲಿ ಹಾಕಿದ್ದಾರೆ, ಒತ್ತುವರಿ ಆಗಿರುವ ಜಾಗದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕೂಡ ಯಾವುದೇ ಸ್ಪಂಧನೆ ನೀಡುತ್ತಿಲ್ಲ ಎಂದು ದೂರಿದ ಸುಖೇಶ್ ಅವರು ಕೆದ್ದೋಟೆಯ ಸ್ಥಳೀಯ ನಿವಾಸಿಗಳು ಈ ಕೆರೆ ಒತ್ತುವರಿ ಮಾಡಿದ್ದಾರೆ, ಈ ಒತ್ತುವರಿಯನ್ನು ತೆರವುಗೊಳಿಸಿ ಪ್ರಾಚಿನ ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕು ಇದಕ್ಕೆ ಹಿಂದೂ ಸಂಘಟನೆಯವರು ಮುಂದೆ ಬರಬೇಕು ಈ ಕ್ಷೇತ್ರ ಅಭಿವೃದ್ಧಿ ಆದರೆ ಅಲ್ಲಿ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣವಾಗುತ್ತದೆ ಅಲ್ಲದೆ ಶ್ರೀಕೃಷ್ಣನ ಯಕ್ಷಪ್ರಶ್ನೆ ಮತ್ತು ಪಾಂಡವರು ನಡೆದಾಡಿದ ಐತಿಹಾಸಿಕ ಸ್ಥಳವಾದುದರಿಂದ ಇದೊಂದು ಪ್ರವಾಸಿ ತಾಣವಾಗಲಿದೆ ಎಂದು ಸುಖೇಶ್ ವಿವರಿಸಿದರು.