ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ | ರಸಗೊಬ್ಬರಕ್ಕೆ 28,655 ಕೋಟಿ ರೂ. ನಿವ್ವಳ ಸಬ್ಸಿಡಿ ಘೋಷಣೆ
ಹಿಂಗಾರು ಬಿತ್ತನೆ ಅವಧಿಯಲ್ಲಿ ರೈತರಿಗೆ ಬಂಪರ್ ಸುದ್ದಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ. ರೈತರಿಗೆ
ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಿಆಂಡ್ ರಸಗೊಬ್ಬರಗಳಿಗೆ 28,655 ಕೋಟಿ ರೂ.ನಿವ್ವಳ ಸಬ್ಸಿಡಿ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ಹಿಂಗಾರು ಹಂಗಾಮಿನ
(ಅಕ್ಟೋಬರ್‌ನಿಂದ ಶುರು) 2021ರ ಅಕ್ಟೋಬರ್‌ನಿಂದ 2022ರ ಮಾರ್ಚ್‌ಗೆ ಅನ್ವಯವಾಗುವಂತೆ ಪಿಆಂಡ್ ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ಎನ್ ಬಿಎಸ್) ಪ್ರಕಾರದ ಸಬ್ಸಿಡಿ ದರಗಳ ಪ್ರಸ್ತಾವನೆಯನ್ನು ಸಮಿತಿ ಅಂಗೀಕರಿಸಿದೆ.
ಇದಲ್ಲದೆ, ಏಕ ಕಂತಿನ ಪ್ಯಾಕೇಜ್ ಆಗಿ ಹೆಚ್ಚುವರಿ ಸಬ್ಸಿಡಿಯನ್ನು ಡಿಎಪಿಗೆ ತಾತ್ಕಾಲಿಕವಾಗಿ ನೀಡಲಾಗುತ್ತಿದೆ. ಇದರ ವೆಚ್ಚ 5,716 ಕೋಟಿ ರೂ. ಏಕಕಂತಿನ ಪ್ಯಾಕೇಜ್‌ನ ಹೆಚ್ಚುವರಿ ಸಬ್ಸಿಡಿಯು ಎನ್‌ಪಿಕೆಯ ಗ್ರೇಡ್‌ಗಳಾದ ಎನ್‌ಪಿಕೆ 10-26-26, ಎನ್‌ಪಿಕೆ 20-20-013, ಎನ್‌ಪಿ 12-32-1 9 ಎಂಬ ಮೂರು ರಸಗೊಬ್ಬರಗಳಿಗೆ ಲಭ್ಯವಿದೆ. ಈ ಗ್ರೇಡ್ ಗಳು ಹೆಚ್ಚು ಬಳಕೆಯಲ್ಲಿರುವಂಥದ್ದಾಗಿದ್ದು, 837 ಕೋಟಿ ರೂಪಾಯಿ ವೆಚ್ಚದಲ್ಲಿ ನೀಡಲಾಗುತ್ತದೆ. ಒಟ್ಟು ಸಬ್ಸಿಡಿ ಮೊತ್ತ 35,115 ಕೋಟಿ ರೂಪಾಯಿ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಡಿಎಪಿ ಸಬ್ಸಿಡಿ ಏರಿಕೆ:
ಕೇಂದ್ರ ಸರ್ಕಾರ ಕಳೆದ ಜೂನ್‌ನ ಡಿಎಪಿ(ಡೈ ಅಮೋನಿಯಂ ಫಾಸ್ಪೇಟ್) ಮತ್ತು ಕೆಲವು ಯೂರಿಯಾಯೇತರ ರಸಗೊಬ್ಬರಗಳ ಸಬ್ಸಿಡಿಯನ್ನು 14,775 ಕೋಟಿ ರೂ.ಗೆ ಏರಿಕೆ ಮಾಡಿತ್ತು. 2021-22ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗೆಂದೇ 79,600 ಕೋಟಿ ರೂ.ಗಳನ್ನು ಸರ್ಕಾರ ಹಂಚಿಕೆ ಮಾಡಿದೆ. ಇದರಂತೆ, ಡಿಎಪಿ ಪ್ರತಿ ಬ್ಯಾಗ್‌ಗೆ 438 ರೂಪಾಯಿ ಪ್ರಯೋಜನ ಸಿಗಲಿದೆ. ಅಲ್ಲದೆ, ಎನ್‌ಪಿಕೆ 10-26-26, ಎನ್‌ಪಿಕೆ 20-20-0-13 ಮತ್ತು ಎನ್‌ಪಿಕೆ 12-32-16 ಬ್ಯಾಗ್‌ಗೆ 100 ರೂಪಾಯಿ ಪ್ರಯೋಜನ ಸಿಗಲಿದೆ.
ಜೂನ್‌ನಲ್ಲಿ ಡಿಎಪಿ ಸಬ್ಸಿಡಿಯನ್ನು 140% ಏರಿಸಿ ಪ್ರತಿ ಬ್ಯಾಗ್‌ಗೆ (50 ಕಿಲೋ) 1,200 ರೂ ತನಕ ಪ್ರಯೋಜನ ನೀಡಿತ್ತು.
ಅಮೃತ್, ಸ್ವಚ್ಛ ಭಾರತ್ 2ನೇ ಹಂತಕ್ಕೆ ಅಸ್ತು:
ಸ್ವಚ್ಛ ಭಾರತ್ ಮಿಷನ್ -ಅರ್ಬನ್ ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಆಂಡ್ ಅರ್ಬನ್ ಟ್ರಾನ್ಸ್ ಫಾಮೇಶನ್ ಅನ್ನು 2025-26ರ ತನಕ ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಅಂಗೀಕರಿಸಿದೆ. ಇದಕ್ಕಾಗಿ ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0ಕ್ಕೆ 1,41,600 ಕೋಟಿ ರೂ.ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು 36,465 ಕೋಟಿ ರೂ. ಅಮೃತ್ 2.0ಕ್ಕೆ 2,77,000 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು 76,760 ಕೋಟಿ ರೂ. ಇದು 2021-22ರಿಂದ 2025-26ರ ತನಕ ನಡೆಯಲಿದೆ.
ಸೈನಿಕ ಶಾಲೆಗಳ ಜೊತೆ ಸಂಯೋಜನೆಗೆ 100 ಸಂಸ್ಥೆಗಳಿಗೆ ಸಮ್ಮತಿ:
ಸೈನಿಕ್ ಸ್ಕೂಲ್ ಸೊಸೈಟಿ ಜತೆಗೆ ಸಂಯೋಜನೆ ಮಾಡಿಕೊಳ್ಳುವುದಕ್ಕೆ 100 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಅಂಗೀಕರಿಸಿದೆ. ಇದರಂತೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿಯಾಗಿ 5,000 ವಿದ್ಯಾರ್ಥಿಗಳಿಗೆ 6 ನೇ ತರಗತಿಯಿಂದ ಸೈನಿಕ್ ಸ್ಕೂಲ್ ಶಿಕ್ಷಣ ಸಿಗಲಿದೆ. ಮೊದ ಹಂತದಲ್ಲಿ ರಾಜ್ಯಗಳು/ಎನ್‌ಜಿಒಗಳು ಮತ್ತು ಖಾಸಗಿ ಪಾಲುದಾರರು ನಡೆಸುವ ಶಾಲೆಗಳು ಸಂಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ದೇಶಾದ್ಯಂತ ಈಗ 33 ಸೈನಿಕ್ ಸ್ಕೂಲ್‌ಗಳಿವೆ. ಇಲ್ಲಿ 3,000 ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಎಲ್ಲ ರೀತಿಯ ಸಮಗ್ರ ಗುಣಮಟ್ಟದ ಶಿಕ್ಷಣ ಪರಿಣಾಮಕಾರಿ ವೆಚ್ಚದಲ್ಲಿ ಬಹುದೊಡ್ಡ ಸಮುದಾಯಕ್ಕೆ ಸಿಗಲು ಈ ಕ್ರಮ ನೆರವಾಗಲಿದೆ ಎನ್ನಲಾಗಿದೆ.