ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ವಿಶೇಷ ಪೂಜೆ | ಸಾವಿರಾರು ಭಕ್ತರಿಂದ ದೇವರ ದರ್ಶನ
ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಹಾಗೂ ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನವಾಗಿರುವ ಬಡಗನ್ನೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿಗ ನವರಾತ್ರಿ ಉತ್ಸವದ ವೈಭವ. ಎರಡು ವರ್ಷಗಳ ಹಿಂದೆ ಪುನರ್ ಚೈತನ್ಯಗೊಂಡು ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ ಸಂದರ್ಭ ಸೇರಿದ ಜನಸ್ತೋಮ ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು.
ಇದೇ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವನ್ನು ನಡೆಯುತ್ತಿದೆ. ನವರಾತ್ರಿಯ 9 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇಗುಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭ ಜಿಲ್ಲೆಯ ವಿವಿಧ ಭಜನಾ ತಂಡಗಳು ಭಜನಾ ಕಾರ್ಯಕ್ರಮ ನಡೆಸಿಕೊಡುತ್ತಿವೆ.
ಕ್ಷೇತ್ರದ ನೂರಾರು ಭಕ್ತರು ನವರಾತ್ರಿಯ ಸಂದರ್ಭ ಸ್ಥಳದಲ್ಲಿ ನೆಲೆಯೂರಿರುವ ದೇವಿಗೆ ಸೇವೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದುದರಿಂದ ಕ್ಷೇತ್ರದ ವತಿಯಿಂದ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರೇ ಸ್ವಯಂ ಆಸಕ್ತಿಯಿಂದ ಉತ್ಸವದ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದು ಸಾನ್ನಿದ್ಯದೆಡೆಗೆ ಜನರ ಭಕ್ತಿಯನ್ನು ತೋರಿಸುತ್ತದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ರಾದ ಜಯಂತ ನಡುಬೈಲು ತಿಳಿಸಿದ್ದಾರೆ.
ಕಳೆದ ಐದು ದಿನಗಳಿಂದ ಶ್ರೀಕ್ಷೇತ್ರಕ್ಕೆ ಭಕ್ತರ ದಂಡೆ ಹರಿದು ಬರುತ್ತಿದೆ. ನವರಾತ್ರಿಯ ಅಪೂರ್ವ ಕ್ಷಣಗಳನ್ನು ಕಣ್ಣುಂಬಿಸಿಕೊಳ್ಳಲು ಸಾವಿರಾರು ಜನರು ನಿತ್ಯವೂ ಆಗಮಿಸುತ್ತಿದ್ದು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧ ರೀತಿಯ ಸೇವೆಗಳನ್ನು ತಮ್ಮ ಅರಾಧ್ಯ ದೈವಕ್ಕೆ ಸಲ್ಲಿಸುತ್ತಿದ್ದಾರೆ.