ಈ ಪ್ರೇಮಿಗಳಿಗೆ ಲಾಂಗ್ ಡ್ರೈವ್ ಹೋಗುವ ಹುಚ್ಚು | ಹಣವಿಲ್ಲದೆ ಲಾಂಗ್ ಡ್ರೈವ್ ಗಾಗಿ ಈ ಖತರ್ನಾಕ್ ಜೋಡಿ ಮಾಡಿದ್ದೇನು ಗೊತ್ತಾ??

ಪ್ರೇಮಿಗಳು ಸಿನಿಮಾ ನೋಡುವುದು, ಪಾರ್ಕ್ ನಲ್ಲಿ ಕುಳಿತು ಹರಟೆ ಹೊಡೆಯುವುದು, ಮಾಲ್ ಸುತ್ತುವುದು ಹಾಗೂ ಲಾಂಗ್ ಡ್ರೈವ್ ಹೋಗೋದು ಮಾಮೂಲಿ. ಹೀಗೆ ಸುತ್ತುವುದರಿಂದ ಕತ್ತರಿ ಬೀಳುವುದು ಯಾವತ್ತು ಹುಡುಗರ ಜೇಬಿಗೆ. ಆದರೆ ಇದೊಂದು ಜೋಡಿಹಕ್ಕಿ ಮಾಡಿದ ಉಪಾಯವೇ ಬೇರೆ. ಲಾಂಗ್ ಡ್ರೈವ್ ಗೋಸ್ಕರ ಹಣವಿಲ್ಲದೆ ಈ ಜೋಡಿ ಏನು ಮಾಡಿದೆ ನೋಡಿ.

 

ಲಾಂಗ್ ಡ್ರೈವ್ ಗೆ ಹೋಗಲು ಹಣ ಇಲ್ಲ ಎಂದು ಪ್ರೇಮಿಗಳಿಬ್ಬರು ಸೇರಿ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿನಯ್ ಹಾಗೂ ಕೀರ್ತನಾ ಬಂಧಿತರಾಗಿರುವ
ಆರೋಪಿಗಳಾಗಿದ್ದಾರೆ.

ವಿನಯ್ ಒಬ್ಬ ರಾಜಾಜಿನಗರದ ರೌಡಿಶೀಟರ್. ಆತನನ್ನು ಕೀರ್ತನಾ ಪ್ರೀತಿ ಮಾಡುತ್ತಿದ್ದಾಳೆ. ಲಾಂಗ್ ಡ್ರೈವ್ ಕರೆದುಕೊಂಡು ಹೋಗು, ಗೋಲ್ಡ್ ಗಿಫ್ಟ್ ಕೊಡಿಸು ಎಂದು ಕೀರ್ತನಾ ಪೀಡಿಸುತ್ತಿದ್ದಳಂತೆ. ಅದಕ್ಕೆ ವಿನಯ್, ನಾನೇ ಕಳ್ಳ ನಿನಗೇನೆ ಗಿಫ್ಟ್ ಕೊಡಿಸಲಿ, ನಾನೊಬ್ಬ ರೌಡಿಶೀಟರ್ ಎಂದು ಕಿಚಾಯಿಸುತ್ತಿದ್ದನಂತೆ.

ನೀನು ರೌಡಿ ಆದರೂ ನಿನ್ನನ್ನೇ ಪ್ರೀತಿ ಮಾಡುತ್ತೇನೆ. ನಿನ್ನ ಜೊತೆ ಜೈಲಿಗೆ ಬೇಕಾದರೂ ಬರುತ್ತೇನೆ ಎಂದು ಹೇಳುತ್ತಿದ್ದಳಂತೆ ಕೀರ್ತನಾ. ಅದರಂತೆ ತನ್ನ ಪ್ರೇಮಿ, ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೈ ಜೋಡಿಸಿ ಇದೀಗ ಜೈಲು ಸೇರಿದ್ದಾಳೆ.

ಈ ಇಬ್ಬರು ಪ್ರೇಮಿಗಳು ಗಂಡ ಹೆಂಡತಿ ರೂಪದಲ್ಲಿ ಮನೆ ಬಾಡಿಗೆಗೆ ಕೇಳಲು ಹೋಗುತ್ತಿದ್ದರಂತೆ. ಮಾಲೀಕರ ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರಂತೆ. ಅಕ್ಟೋಬರ್ 04 ರಂದು ಮಾರುತಿನಗರದ ಕುಲಶೇಖರ್ ಎನ್ನುವವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ತೆರಳಿದ್ದ ಆರೋಪಿಗಳು, ಅಲ್ಲಿಯೂ ಮನೆಯಲ್ಲಿದ್ದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ 15 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಘಟನೆ ಕುರಿತು ಮಾಲೀಕ ಕುಲಶೇಖರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮನೆ ಮಾಲೀಕರ ಜೊತೆಯಲ್ಲಿ ಬಾಡಿಗೆ ಮಾತನಾಡುವ ನೆಪದಲ್ಲಿ ವಿನಯ್ ಮಾತಿಗಿಳಿಯುತ್ತಿದ್ದರಂತೆಯೇ, ಮನೆ ತುಂಬಾ ಚೆನ್ನಾಗಿದೆ ಅಂತ ಹೇಳಿ ಕೀರ್ತನಾ ಮನೆ ನೋಡಲು ಮುಂದಾಗುತ್ತಿದ್ದಳಂತೆ. ಇತ್ತ ಮಾಲೀಕರ ಗಮನವನ್ನು ವಿನಯ್ ಬೇರೆಡೆ ಸೆಳೆಯುತ್ತಿದಂತೆಯೇ ಕೀರ್ತನಾ ಮನೆಯಲ್ಲಿ ಸಿಕ್ಕ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಎಗರಿಸುತ್ತಿದ್ದಳು ಎನ್ನಲಾಗಿದೆ.

ಕೊನೆಗೂ ಈ ಖತರ್ನಾಕ್ ಕಳ್ಳ ಜೋಡಿ ಪೊಲೀಸರ ಅತಿಥಿಗಳಾಗಿದ್ದಾರೆ. ಹೀಗೆ ಅದೆಷ್ಟು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ.

Leave A Reply

Your email address will not be published.