ಸರ್ವೆ ಗ್ರಾಮದ ಸೊರಕೆಯಲ್ಲಿ 4 ವರ್ಷದ ಹಿಂದೆ ವಿದ್ಯುತ್ ಶಾಕ್‌ನಿಂದ ಪವರ್‌ಮ್ಯಾನ್ ಶ್ರೀ ಶೈಲ ಮೃತ್ಯು ಪ್ರಕರಣ |
ಮೆಸ್ಕಾಂ ಲೈನ್‌ಮ್ಯಾನ್ ಸಿದ್ಧಯ್ಯರಿಗೆ ಜೈಲು ಶಿಕ್ಷೆ ತೀರ್ಪು ನೀಡಿದ ಪುತ್ತೂರು ನ್ಯಾಯಾಲಯ
ಪುತ್ತೂರು : 4 ವರ್ಷದ ಹಿಂದೆ ಸರ್ವೆ ಗ್ರಾಮದ ಸೊರಕೆ ಸಮೀಪ ದುರಸ್ತಿಗೆಂದು ಕಂಬವೇರಿದ ಮೆಸ್ಕಾಂ ಪವರ್ ಮ್ಯಾನ್ ಓರ್ವರು ವಿದ್ಯುತ್ ಶಾಕ್‌ಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸವಣೂರು ಮೆಸ್ಕಾಂ ಹಿರಿಯ ಪವರ್‌ಮ್ಯಾನ್ ಮಾರ್ಗದಾಳು ಸಿದ್ದಯ್ಯ ಅವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2017ರ ಮಾ.2ರಂದು ಸೊರಕೆ ಪರಂಟೋಲು ಬಳಿ ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್ ಕಂಬವೇರಿದ್ದ ಮೆಸ್ಕಾಂ ಜೂನಿಯರ್ ಪವರ್‌ಮ್ಯಾನ್, ಬಾಗಲಕೋಟೆ ಮೂಲದ ಶ್ರೀಶೈಲ ಗುರಪ್ಪ (26ವ.)ಅವರು ವಿದ್ಯುತ್ ಶಾಕ್‌ಗೊಳಗಾಗಿ ಕೆಳಕ್ಕೆ ಬಿದ್ದು ಸಾವಿಗೀಡಾಗಿದ್ದರು.
ಶ್ರೀಶೈಲ ಅವರು ಕಂಬವೇರಿ ಕೆಲಸ ಮಾಡುತ್ತಿರುವಾಗ ಅವರ ತಲೆಗೆ ಹೆಚ್‌ಟಿ ಲೈನಿನ ತಂತಿ ತಾಗಿದ್ದರಿಂದ ಘಟನೆ ಸಂಭವಿಸಿತ್ತು.ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಮತ್ತು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಶ್ರೀಶೈಲ ಅವರನ್ನು ಕಂಬಕ್ಕೆ ಹತ್ತಿಸಿ ಕೆಲಸ ಮಾಡಿಸಲಾಗುತ್ತಿತ್ತು ಎಂದು ಆರೋಪ ವ್ಯಕ್ತವಾಗಿತ್ತು.
ಈ ಕುರಿತು ಆಗಿನ ಸಂಪ್ಯ ಎಸ್.ಐ ಅಬ್ದುಲ್ ಖಾದರ್ ಅವರು ಶಾಖಾಧಿಕಾರಿ ರಮೇಶ್ ಮತ್ತು ಮಾರ್ಗದಾಳು ಸಿದ್ದಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಜೊತೆಗೆ ಆರೋಪಿ ಸಿದ್ದಯ್ಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ನಡುವೆ ಮೆಸ್ಕಾಂ ಇಲಾಖೆ ರಮೇಶ್ ಮತ್ತು ಸಿದ್ದಯ್ಯ ಅವರನ್ನು ಅಮಾನತು ಮಾಡಿದೆ ಎಂದು ಹಿರಿಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ವಿಚಾರಣೆ ನಡೆಸಿದ ಎಡಿಷನಲ್ ಸಿವಿಲ್ ನ್ಯಾಯಾಧೀಶೆ ನಿರ್ಮಲದೇವಿ ಅವರು ಆರೋಪಿ ಸಿದ್ದಯ್ಯ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ, ರೂ. 1 ಸಾವಿರ ದಂಡ, ದಂಡ ತೆರಳು ತಪ್ಪಿದ್ದಲ್ಲಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಪ್ರಾಸಿಕ್ಯೂಶನ್ ಪರ ವಾದಿಸಿದರು.