ಮನೆ ಮನೆಗೆ ಬಂದು ಯಕ್ಷಕಲೆಯ ರಸದೌತಣ ನೀಡುವ ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ

ಕಳೆದ ಕೆಲ ತಿಂಗಳಿನಿಂದ ಮನೆ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದ ಗೆಜ್ಜೆ ನಾದ, ಮದ್ದಳೆ, ತಾಳದ ಅಬ್ಬರ ಅನುರಣಿಸುತ್ತದೆ, ಭಾಗವತಿಕೆಯ ಭಾವಗಾಯನ ಮೊಳಗುತ್ತದೆ.ಯಕ್ಷಗಾನ ವೇಷಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಮನೆಗೆ ಬಂದು ಮನೆ ಮಂದಿಗೆ ಯಕ್ಷ ಕಲೆಯ ರಸದೌತಣವನ್ನು ಉಣಬಡಿಸುತ್ತಾರೆ.

ಕರಾವಳಿಯ ಜಾನಪದ ಕಲೆ ಯಕ್ಷಗಾನಕ್ಕೆ ಶತಮಾನಗಳ ಇತಿಹಾಸವಿದೆ. ಇದನ್ನು ಆರಾಧನಾ ಕಲೆಯೆಂದೇ ಕರೆಯಲಾಗುತ್ತಿದೆ. ವರ್ಷದ ಮಳೆಗಾಲವನ್ನು ಹೊರತು ಪಡಿಸಿ ನವೆಂಬರ್ ನಿಂದ ಮೇವರೆಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೊಡು ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ಯಕ್ಷಗಾನ ಪ್ರದರ್ಶನ ನೀಡುತ್ತಿದ್ದವು.ಕೋವಿಡ್ ಕರಿಮೋಡದಿಂದ ಯಕ್ಷಗಾನ ಪ್ರದರ್ಶನಕ್ಕೂ ಸಂಚಕಾರ ಬಂತು.

ಆದರೆ ಚಿಕ್ಕ‌ಮೇಳದ ಮೂಲಕ ಕೇವಲ 4 ರಿಂದ 5 ಜನ ಕಲಾವಿದರು ಮನೆಮನೆಗೆ ತೆರಳಿ ಅಲ್ಪ ಅವಧಿಯ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ. ಈ ಮೂಲಕ ಮನೆ ಮಕ್ಕಳಿಗೆ ಯಕ್ಷಗಾನದ ಅರಿವು ಮೂಡಿಸುವ ಕಾರ್ಯವನ್ನು ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳದವರು ನಡೆಸುತ್ತಿದ್ದಾರೆ.

ಯಕ್ಷಗಾನ ನಾದ ತರಂಗದಿಂದ ದುಷ್ಟಶಕ್ತಿಗಳು ದೂರವಾಗಿ, ಮನೆಯ ವಾಸ್ತು ಸಂತೃಪ್ತಿಗೊಂಡು ಮನೆಯ ದೋಷಗಳು ಪರಿಹಾರವಾಗಿ ಬರುವ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಬಂದಿದೆ.

ಒಂದು ಊರಿನ ಹಲವು ಮನೆಗಳಿಗೆ ತೆರಳಿ ಈ ತಿರುಗಾಟದ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ. ದಿನದಲ್ಲಿ ಸಂಜೆ 6ರಿಂದ ರಾತ್ರಿ 11ರ ತನಕ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸುತ್ತಾರೆ. ಹೂ ಹಣ್ಣು ಅಕ್ಕಿ ತೆಂಗಿನಕಾಯಿ ಮತ್ತು ದೀಪ ಇಟ್ಟು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಯಾವುದಾದರೂ ಒಂದು ಪ್ರಸಂಗದ ಚಿಕ್ಕ ಭಾಗವನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ.

ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷ ಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ತಂಡದಲ್ಲಿರುತ್ತಾರೆ. ಪ್ರತಿ ಮನೆಯಲ್ಲಿ ಕಲಾವಿದರಿಗೆ ಕಾಣಿಕೆಯನ್ನೂ ನೀಡಲಾಗುತ್ತದೆ. ಈ ಮೂಲಕ ಯಕ್ಷ ಸೇವೆಯ ಜೊತೆ ತನ್ನ ಬದುಕಿನ ನಿರ್ವಹಣೆಯನ್ನು ಕಲಾವಿದ ಕಂಡುಕೊಳ್ಳುತ್ತಾನೆ.

ತಂಡದ ವ್ಯವಸ್ಥಾಪಕರಾಗಿ ಜಗದೀಶ್ ಕನ್ಯಾನ, ಭಾಗವತರಾಗಿ ಸುಬ್ಬು ಸಂಟ್ಯಾರ್,ಸುರೇಶ್ ರೈ ಬೆಳ್ಳಾರೆ,ಮದ್ದಳೆ – ಪ್ರಮೋದ್ ಪಾಣಾಜೆ,ಯಕ್ಷ ಕಲಾವಿದರು- ಜಗದೀಶ್ ಕನ್ಯಾನ,ಬಾಲಕೃಷ್ಣ ಪ್ರಭು ಅಡ್ಯನಡ್ಕ ಮತ್ತು ಉದಯ ಮಡಿವಾಳ ,ಸುಂದರ ನಾಯ್ಕ ಪಾಣಾಜೆ , ಶ್ರೀಪಾದ ಇವರನ್ನೊಳಗೊಂಡ ತಂಡ ಮನೆ ಮನೆಗೆ ತೆರಳಿ ಯಕ್ಷ ರಸದೌತಣ ನೀಡುತ್ತಿದೆ.

ಇವರ ಈ ತಂಡದ ಪ್ರಾಯೋಜಕತ್ವದಲ್ಲಿ ನುರಿತ ಗುರುಗಳಿಂದ ಉಚಿತ ಯಕ್ಷಗಾನ ನಾಟ್ಯ ತರಬೇತಿ, ಅಜೀರ್ಣಾವಸ್ಥೆಯಲ್ಲಿರುವ ದೇವಸ್ಥಾನ, ಮಂದಿರಗಳಿಗೆ ಆರ್ಥಿಕ ಸಹಕಾರ ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರಿಗೆ ಕಿಂಚಿತ್ ಸಹಕಾರ ನೀಡುತ್ತಾ ಜನರ ಗೌರವಕ್ಕೂ ಪಾತ್ರರಾಗಿದೆ.

ಒಂದೆಡೆ ಕಲಾವಿದರ ಜೀವನ ನಿರ್ವಹಣೆ ಇನ್ನೊಂದೆಡೆ ಕಲಾ ಸೇವೆ ಹೀಗೆ ತಿರುಗಾಟದ ಮೇಳದ ಮೂಲಕ ಯಕ್ಷಗಾನದ ಕಂಪನ್ನು ಮನೆಮನೆಗೆ ಪಸರಿಸುತ್ತದೆ. ಈ ಮೂಲಕ ಮಕ್ಕಳಿಗೆ ಮನೆಮಂದಿಗೆ ಮನರಂಜನೆಯನ್ನೂ ಒದಗಿಸಿ ಯಕ್ಷ ಕಲೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಈ ಕನ್ಯಾನ ಅಂಗ್ರಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ.

Leave A Reply

Your email address will not be published.