ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಸಕಾಲದಲ್ಲಿ ಬಾರದ ಆಂಬ್ಯುಲೆನ್ಸ್ | ಕೊನೆಗೆ ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ!!
ಹೆರಿಗೆ ನೋವು ಶುರುವಾಗಿ ಸಕಾಲದಲ್ಲಿ ಆಂಬ್ಯುಲೆನ್ಸ್ ಬಾರದ ಕಾರಣ 28 ವರ್ಷದ ಮಹಿಳೆಯೊಬ್ಬರು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಭೋಪಾಲ್ ನ ದೇವಗಾಂವ್ ಗ್ರಾಮದಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ಜನನಿ ಎಕ್ಸ್‌ಪ್ರೆಸ್ ಆಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದೆವು. ಆದರೆ ಜನನಿ ಎಕ್ಸ್‌ಪ್ರೆಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ಹೀಗಾಗಿ ಮಹಿಳೆಯನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಸಾಗಿಸಬೇಕಾಯಿತು ಎಂದು ಮಹಿಳೆಯ ಸಂಬಂಧಿ ಸಂತ್ರಮ್ ಪಟೇಲ್ ಹೇಳಿದ್ದಾರೆ.
ನಾನು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಲ್ಕು ಬಾರಿ 108 ಗೆ ಕರೆ ಮಾಡಿದೆ. 10 ನಿಮಿಷದಲ್ಲಿ ಆಂಬ್ಯುಲೆನ್ಸ್ ಬರುತ್ತದೆ ಎಂಬ ಮಾಹಿತಿ ಸಿಕ್ಕಿತು. ಆದರೆ ಎರಡು ಗಂಟೆ ಕಳೆದರೂ ಆಂಬ್ಯುಲೆನ್ಸ್ ಬರಲಿಲ್ಲ. ಕೊನೆಗೆ ಟ್ರ್ಯಾಕ್ಟರ್ ಟ್ರಾಲಿ ಮೂಲಕ ಆಕೆಯನ್ನು ಅಜಯ್‍ಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಮಾರ್ಗ ಮಧ್ಯದಲ್ಲೇ ಆಕೆಗೆ ಹೆರಿಗೆಯಾಯಿತು ಎಂದು ಹೇಳಿದ್ದಾರೆ.
ಆದರೆ ಈ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕ್ರಮತೆಗೆದುಕೊಳ್ಳುತ್ತೇವೆ. ತನಿಖೆ ನಡೆಸುತ್ತೇವೆ ಎಂದು ಮುಖ್ಯ ಆರೋಗ್ಯಾಧಿಕಾರಿ ಆರ್.ಕೆ.ಪಾಂಡೆ ಹೇಳಿದ್ದಾರೆ.