ನಿನ್ನೆ ಪ್ರಪಂಚದಾತ್ಯಂತ ಫೇಸ್‌ಬುಕ್‌, ವಾಟ್ಸಪ್, ಇನ್ಸ್ಟಾಗ್ರಾಮ್ ಸ್ಥಗಿತಗೊಳ್ಳಲು ಕಾರಣವಾದರೂ ಏನು?? | ಇದರಿಂದ ಮಾರ್ಕ್ ಜುಕರ್‌ಬರ್ಗ್‌ಗೆ ಆದ ನಷ್ಟವಾದರೂ ಎಷ್ಟು ಗೊತ್ತೇ?? !!

ನಿನ್ನೆ ರಾತ್ರಿ ಪ್ರಪಂಚದಾದ್ಯಂತ ಫೇಸ್ಬುಕ್ ಹಾಗೂ ಫೇಸ್ಬುಕ್ ಇಂಕ್ ನ ಇನ್ಸ್ಟಾಗ್ರಾಮ್ ಹಾಗು ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬಹಳಷ್ಟು ಮಂದಿ ಇದರಿಂದ ತುಂಬಾ ಪರದಾಡಿದ್ದಾರೆ. ಆದರೆ ಇದಕ್ಕೆ ಕಾರಣ ಏನೆಂಬುದು ಇದೀಗ ಹೊರಬಿದ್ದಿದೆ ಹಾಗೂ ಇದರಿಂದ ಫೇಸ್ಬುಕ್ ಸಂಸ್ಥಾಪಕನಿಗಾದ ನಷ್ಟವು ಎಲ್ಲರಿಗೂ ಅಚ್ಚರಿ ತಂದಿದೆ.

ಅಕ್ಟೋಬರ್ 4 ಅಂದರೆ ನಿನ್ನೆ ರಾತ್ರಿ (ಭಾರತೀಯ ಕಾಲಮಾನದಲ್ಲಿ) ಜಗತ್ತಿನಾದ್ಯಂತ ಫೇಸ್‌ಬುಕ್‌ ಸೇವೆ ಹಾಗೂ ಫೇಸ್‌ಬುಕ್‌ ಇಂಕ್‌ನ ಇನ್ಸ್ಟಾಗ್ರಾಮ್‌ ಹಾಗೂ ವಾಟ್ಸ್‌ಆ್ಯಪ್‌ ಸೇವೆಯಲ್ಲೂ ಕೆಲ ಕಾಲ ವ್ಯತ್ಯಯವಾಗಿತ್ತು. ಹಲವರು ಈ ಸಮಸ್ಯೆಯನ್ನು ಎದುರಿಸಿದರು. ಇದರಿಂದ ಫೇಸ್‌ಬುಕ್‌ ಕಂಪನಿಯ ವಿರುದ್ಧ ಹಲವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಸೇರಿ ಹಲವೆಡೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಸೇವೆಯ ವ್ಯತ್ಯಯ, ಆಕ್ರೋಶದ ಪರಿಣಾಮ ಎಷ್ಟು ಅಂತೀರಾ..? ಬರೋಬ್ಬರಿ ಸುಮಾರು 7 ಬಿಲಿಯನ್ ಡಾಲರ್‌..!

ಹೌದು, ವಿಷಲ್‌ ಬ್ಲೋವರ್‌ ಪರಿಣಾಮದಿಂದ ಹಾಗೂ ಫೇಸ್‌ಬುಕ್‌ ಹಾಗೂ ಫೇಸ್‌ಬುಕ್‌ ಇಂಕ್‌ನ ಇತರ ಸೋಶಿಯಲ್‌ ಮೀಡಿಯಾ ಸೇವೆ ವ್ಯತ್ಯಯವಾದ ಕೆಲವೇ ಗಂಟೆಗಳಲ್ಲಿ ಫೇಸ್‌ಬುಕ್‌ ಕಂಪನಿಯ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.

ಇದರಿಂದ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅವರನ್ನು ಕೆಳಕ್ಕೆ ತಳ್ಳಿತು. ಫೇಸ್‌ಬುಕ್ ಇಂಕ್‌ನ ಪ್ರಮುಖ ಉತ್ಪನ್ನಗಳು ಆಫ್‌ಲೈನ್‌ಗೆ ಹೋದ ಕಾರಣ ಜುಕರ್‌ಬರ್ಗ್‌ ಸಂಪತ್ತು ಕರಗಿದೆ. ಷೇರುಗಳ ಮಾರಾಟದ ಪರಿಣಾಮ ಸಾಮಾಜಿಕ ಮಾಧ್ಯಮ ದೈತ್ಯ ಜುಕರ್‌ಬರ್ಗ್‌ ಷೇರುಗಳು ಸೋಮವಾರ ಶೇ. 5ರಷ್ಟು ಕುಸಿದಿದೆ. ಅಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟಾರೆ ಸುಮಾರು ಶೇ. 15ರಷ್ಟು ಷೇರುಗಳ ಮೌಲ್ಯ ಕುಸಿದಿದೆ.

ಸೋಮವಾರದ ಷೇರುಗಳ ಕುಸಿತದ ಕಾರಣದಿಂದ ಜುಕರ್‌ಬರ್ಗ್‌ನ ಆಸ್ತಿ ಮೌಲ್ಯ 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅಗ್ರ ಶ್ರೀಮಂತರ ಪೈಕಿ 5ನೇ ಸ್ಥಾನಕ್ಕಿಳಿದಿದ್ದಾರೆ. ಬಿಲ್‌ ಗೇಟ್ಸ್‌ ನಂತರದ ಸ್ಥಾನಕ್ಕೆ ಕುಸಿದಿದ್ದಾರೆ ಜುಕರ್‌ಬರ್ಗ್‌. ಸೆಪ್ಟೆಂಬರ್ 13ರಂದು ಸುಮಾರು 140 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದ ಜುಕರ್‌ಬರ್ಗ್‌ನ ಆಸ್ತಿ ಬರೋಬ್ಬರಿ ಸುಮಾರು 19 ಬಿಲಿಯನ್ ಡಾಲರ್‌ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಆಂತರಿಕ ದಾಖಲೆಗಳ ಸಂಗ್ರಹವನ್ನು ಆಧರಿಸಿ ಕಥೆಗಳ ಸರಣಿಯನ್ನು ಪ್ರಕಟಿಸಲು ಪ್ರಾರಂಭಿಸಿತು. ಇದರಲ್ಲಿ, ಫೇಸ್‌ಬುಕ್ ತನ್ನ ಉತ್ಪನ್ನಗಳಿಂದ ಆಗುತ್ತಿರುವ ವ್ಯಾಪಕ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ, ಸಮಸ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಬಹಿರಂಗಪಡಿಸಿತು. ಇನ್ಸ್ಟಾಗ್ರಾಮ್‌ನಿಂದ ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯಕ್ಕೆ ಹಾನಿ ಹಾಗೂ ಜನವರಿ 6ರ ಅಮೆರಿಕದ ಕ್ಯಾಪಿಟಲ್‌ ಗಲಭೆಗಳ ಬಗ್ಗೆ ತಪ್ಪು ಮಾಹಿತಿ ಹರಡುವಿಕೆ ಮುಂತಾದ ಸಮಸ್ಯೆಗಳು ಬಹಿರಂಗಗೊಂಡ ಬಳಿಕ ಮಾರ್ಕ್‌ ಜುಕರ್‌ಬರ್ಗ್‌ ಸಂಪತ್ತು ಕರಗುತ್ತಲೇ ಇದೆ.

ಈ ವರದಿಗಳು ಸರ್ಕಾರಿ ಅಧಿಕಾರಿಗಳ ಗಮನ ಸೆಳೆದಿವೆ ಮತ್ತು ಇವುಗಳನ್ನು ಬಹಿರಂಗಪಡಿಸಿದ ವಿಷಲ್‌ಬ್ಲೋವರ್‌, ಸ್ವತ: ತಾನು ಯಾರು ಎಂಬುದನ್ನು ಸೋಮವಾರ ಬಹಿರಂಗಪಡಿಸಿಕೊಂಡಳು. ಈ ಘಟನೆ ಹಾಗೂ ಫೇಸ್‌ಬುಕ್‌ ಇಂಕ್‌ನ ಸೋಶಿಯಲ್‌ ಮೀಡಿಯಾ ಸೇವೆಗಳ ವ್ಯತ್ಯಯದಿಂದಾಗಿ ಮಾರ್ಕ್‌ ಜುಕರ್‌ಬರ್ಗ್‌ ಆಸ್ತಿಯ ಮೌಲ್ಯ ಕಡಿಮೆಯಾಗಿದೆ. ಆದರೆ, ವಿಷಲ್‌ ಬ್ಲೋವರ್‌ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಫೇಸ್‌ಬುಕ್, ರಾಜಕೀಯ ಧ್ರುವೀಕರಣ ಸೇರಿದಂತೆ ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿವೆ ಮತ್ತು ತಂತ್ರಜ್ಞಾನದಿಂದ ಮಾತ್ರ ಇದು ಉಂಟಾಗಿಲ್ಲ ಎಂದು ಒತ್ತಿ ಹೇಳಿದೆ.

“ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಾಜಕೀಯ ಧ್ರುವೀಕರಣದ ಸಮಸ್ಯೆಗಳಿಗೆ ಟೆಕ್ನಾಲಜಿಕಲ್‌ ಅಥವಾ ಟೆಕ್ನಿಕಲ್‌ ವಿವರಣೆ ಇರಬೇಕು ಎಂದು ಭಾವಿಸುವುದು ಜನರಿಗೆ ಕೇವಲ ಸಾಂತ್ವನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಜಾಗತಿಕ ವ್ಯವಹಾರಗಳ ಫೇಸ್‌ಬುಕ್‌ ಉಪಾಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.

ವಾಟ್ಸ್ ಆ್ಯಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ 40 ರಷ್ಟು ಬಳಕೆದಾರರಿಗೆ ಆಪ್, ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ, ಶೇ .30 ರಷ್ಟು ಜನರಿಗೆ ಸಂದೇಶ ಕಳುಹಿಸಲು ತೊಂದರೆಯಾಗಿದೆ ಮತ್ತು ಶೇ. 22 ರಷ್ಟು ಮಂದಿ ವೆಬ್ ಆವೃತ್ತಿಯಲ್ಲಿ ಸಮಸ್ಯೆ ಎದುರಿಸಿದ್ದಾರೆ.

ಜಗತ್ತಿನಲ್ಲಿ ಸುಮಾರು 200 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸ್ ಆಯಪ್ ಬಳಕೆದಾರರು, 41 ಕೋಟಿ ಫೇಸ್‌ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‌ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಇವರಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ಈ ಸಮಸ್ಯೆ ಎದುರಿಸಿದ್ದಾರೆ. ಅಸಲಿಗೆ ಇಂಥ ಸಮಸ್ಯೆಗಳು ಬಂದಾಗ ಕಂಪೆನಿಗಳು ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ತಾಂತ್ರಿಕ ದೋಷ ಕಾರಣ ಎಂದು ವಿವರಣೆ ನೀಡಲಾಗಿದ್ದು, ಜುಕರ್‌ಬರ್ಗ್ ಬಳಕೆದಾರರ ಕ್ಷಮೆ ಕೋರಿದ್ದಾರೆ.

Leave A Reply

Your email address will not be published.