ಅಪರೂಪದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಬಲೆಗೆ | ಹೆಲಿಕಾಪ್ಟರ್ ಮೀನು ಎಂದೂ ಕರೆಯುವ ಈ ಮೀನು ಕೇರಳಕ್ಕೆ ಸಾಗಾಣಿಕೆ
ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಅಪರೂಪದ ಹಾಗೂ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ದೊರೆತಿದೆ.
ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಈ ಮೀನು ಎಲ್ಲರನ್ನು ನಿಬ್ಬೆರೆಗುಗೊಳಿಸಿದೆ.
ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿರುವ ಸಮುದ್ರ ದಲ್ಲಿ ಲುಕ್ಕನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ, ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಮೀನು ಬಿದ್ದಿದೆ.
ಸ್ಥಳೀಯವಾಗಿ ಇದಕ್ಕೆ ನೆಮ್ಮಿನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಈ ಮೀನು ಸುಮಾರು 84 ಕೆ.ಜಿ. ತೂಗುತ್ತಿತ್ತು.
ಕರ್ನಾಟಕದಲ್ಲಿ ಈ ಮೀನು ಹೆಚ್ಚಾಗಿ ತಿನ್ನುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ಈ ಮೀನಿನ ಮಾಂಸವನ್ನು ಖರೀದಿ ಮಾಡುತ್ತಾರೆ.
ಈ ಮೀನನ್ನು ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ರವಾನೆ ಮಾಡ ಲಾಯಿತು ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.
‘ಅತ್ಯಂತ ಅಪರೂಪವಾಗಿರುವ ಈ ಮೀನು ಅಳಿವಿನಂಚಿನಲ್ಲಿರುವ ಪ್ರಬೇಧಕ್ಕೆ ಸೇರಿದೆ. ಸಮುದ್ರದಲ್ಲಿ ಎಲ್ಲ ಕಡೆ ಹರಡುಕೊಂಡಿರುವ ಈ ಮೀನು ಮೀನುಗಾರರ ಬಲೆಗೆ ಸಿಗುವುದು ಅಪರೂಪ. ಹವಳ ಬಂಡೆಗಳ ಮಧ್ಯೆ ಇವು ವಾಸಿಸುತ್ತದೆ. 90 ಮೀಟರ್ ಆಳದವರೆಗಿನ ಸಮುದ್ರದಲ್ಲಿ ಇದು ಬದುಕುತ್ತದೆ. ಕೆಲವೊಂದು ಬಾರಿ ತೀರಕ್ಕೂ ಬರುತ್ತದೆ. 2.5 ಮೀಟರ್ಗೂ ಅಧಿಕ ಉದ್ದ ಇರುತ್ತದೆ. ಸುಮಾರು 135 ಕೆ.ಜಿ.ವರೆಗೆ ತೂಗುತ್ತದೆ. ಈ ಮೀನನ್ನು ಭಾರತದಲ್ಲಿ ತಿನ್ನುತ್ತಾರೆ ಎಂದು ಕಾರವಾರ ಕರ್ನಾಟಕ ವಿವಿ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.