ಗ್ರಾಹಕರಿಗೆ ಬಿಗ್ ಶಾಕ್ | ಮತ್ತೆ ದುಬಾರಿಯಾಗಿದೆ ಅಡುಗೆ ಎಣ್ಣೆ !! ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆಯೇ ಕೈ ಸುಡುತ್ತಿದೆ ಅಡುಗೆ ಎಣ್ಣೆ
ಈಗಾಗಲೇ ಕೊರೊನಾದಿಂದಾಗಿ ಜನ ಕಂಗಾಲಾಗಿದ್ದಾರೆ. ಹಲವು ಮಂದಿ ಉದ್ಯೋಗ ಕಳೆದುಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಅದರ ಜೊತೆಗೆ ಒಂದಿಲ್ಲೊಂದು ಬೆಲೆ ಏರಿಕೆಯಿಂದ ಪರದಾಡುತ್ತಿದ್ದಾರೆ. ಈ ನಡುವೆ ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಎಣ್ಣೆ ಸಹ ಇದೀಗ ಇನ್ನಷ್ಟು ದುಬಾರಿಯಾಗಿದೆ.
ವಿವಿಧ ಬಗೆಯ ಅಡುಗೆ ಎಣ್ಣೆ ದರಗಳಲ್ಲಿ 15- 20 ರೂಪಾಯಿ ಹೆಚ್ಚಾಗಿದೆ. 140ರೂ. ಇದ್ದ ಒಂದು ಲೀಟರ್ ಸನ್‍ಪ್ಯೂರ್ ಇದೀಗ 155 ರೂ. ಆಗಿದೆ. ಅದೇ ರೀತಿ ಗೋಲ್ಡ್ ವಿನ್ನರ್ 150 ರೂ.ನಿಂದ 160 ರೂ., ಸಫೋಲಾ 180 ರೂ.ನಿಂದ 200 ರೂ., ಫ್ರೀಡಂ 150 ರೂ.ನಿಂದ 160 ರೂ.ಗೆ ಏರಿಕೆಯಾಗಿದೆ.
ಇನ್ನು ಪೆಟ್ರೋಲ್, ಡೀಸೆಲ್ ದರ ಸಹ ಸತತ ನಾಲ್ಕು ದಿನಗಳಿಂದ ಏರಿಕೆ ಕಾಣುತ್ತಿದ್ದು, ಬಹುತೇಕ ಪ್ರಮುಖ ನಗರಗಳಲ್ಲಿ 100 ರೂ. ಗಡಿ ದಾಟಿದೆ. ಇಂದು ಸಹ ಪೆಟ್ರೋಲ್ ಬೆಲೆ 25 ಪೈಸೆ ಹಾಗೂ ಡೀಸೆಲ್ ಬೆಲೆ 30 ಪೈಸೆ ಹೆಚ್ಚಳವಾಗಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಜಾಗತಿಕ ಉತ್ಪಾದನೆಯಲ್ಲಿ ಅಡಚಣೆ ಹಿನ್ನೆಲೆ ಇಂಧನ ಕಂಪನಿಗಳು ತಮ್ಮ ಸಂಗ್ರಹ ಸಾಮಥ್ರ್ಯಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ ಕಚ್ಚಾ ತೈಲದ ಬೆಲೆ ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಟ ಮಟ್ಟ ತಲುಪಿದೆ. ಕಳೆದ ಕೆಲವು ದಿನಗಳಿಂದ ಪ್ರತಿ ಬ್ಯಾರಲ್‍ಗೆ 78 ಡಾಲರ್ ನೀಡಿ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ.