ಜಲ ಜೀವನ್ ಮಿಷನ್ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಲ ಜೀವನ್ ಮಿಷನ್‌ನ ಅಡಿಯಲ್ಲಿ ಗ್ರಾಮ ಪಂಚಾಯತ್ ಮತ್ತು ಜಲ ಸಮಿತಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಈ ಯೋಜನೆ ಜನರಿಗೆ ನೀರನ್ನು ತಲುಪಿಸುವ ನಿಟ್ಟಿನಲ್ಲಿನ ಚಳುವಳಿ ಮಾತ್ರವಲ್ಲ, ಬಹುದೊಡ್ಡ ಗ್ರಾಮ ಕೇಂದ್ರಿತ ವಿಕೇಂದ್ರೀಕರಣ ಚಳುವಳಿ ಕೂಡ ಆಗಿದೆ” ಎಂದಿದ್ದಾರೆ.
ಈ ಸಂದರ್ಭದಲ್ಲಿ ಇ-ಕೈಪಿಡಿ ‘ಜಲಜೀವನ್ ಮಿಷನ್ ಕೇ 2 ವರ್ಷ್’ ಅನ್ನು ಬಿಡುಗಡೆ ಮಾಡಿದರು. ಅಲ್ಲದೇ, ಜಲಜೀವನ್ ಮಿಷನ್ ಮತ್ತು ರಾಷ್ಟ್ರೀಯ ಜಲಜೀವನ್ ಕೋಶ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು.
ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಸ್ಮರಿಸಿದ ಮೋದಿ, “ಶ್ರೇಷ್ಠ ನಾಯಕರಾದ ಬಾಪು ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಹೃದಯದಲ್ಲಿ ಭಾರತದ ಗ್ರಾಮಗಳು ನೆಲೆಸಿವೆ. ಈ ದಿನದಂದು ದೇಶದಾದ್ಯಂತದ ಗ್ರಾಮಗಳ ಲಕ್ಷಾಂತರ ಜನರು ಗ್ರಾಮಸಭಾ ವಿಧಾನದಲ್ಲಿ ಜಲಜೀವನ ಸಂವಾದ ನಡೆಸುತ್ತಿದ್ದಾರೆ ಎಂಬುದು ಸಂತೋಷ ತಂದಿದೆ. ಈ ಉತ್ಸಾಹ ಮತ್ತು ಸಾಮರ್ಥ್ಯದೊಂದಿಗೆ ಅಭೂತಪೂರ್ವ ಮಟ್ಟದಲ್ಲಿ ದೇಶವ್ಯಾಪಿಯಾಗಿ ಮಿಷನ್ ಯಶಸ್ವಿಯಾಗಲಿದೆ” ಎಂದಿದ್ದಾರೆ.
ಇದು ಗ್ರಾಮ ಕೇಂದ್ರಿತ ಮತ್ತು ಮಹಿಳಾ ಕೇಂದ್ರಿತ ಯೋಜನೆ. ಸಾಮೂಹಿಕ ಮತ್ತು ಸಾರ್ವಜನಿಕ ಭಾಗಿತ್ವ ಇದರ ಮೂಲವಾಗಿದೆ ಎಂದು ಮೋದಿ ಹೇಳಿದ್ದಾರೆ.
ಜಲಜೀವನ್ ಮಿಷನ್ ಅಪ್ಲಿಕೇಶನ್ ಬಗ್ಗೆ ಮಾತನಾಡಿದ ಮೋದಿ, ಅಭಿಯಾನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳು ಇದರಲ್ಲಿ ಲಭ್ಯವಾಗಲಿದೆ. ಗ್ರಾಮಗಳ ಜನರು ನೀರಿನ ಶುದ್ಧತ್ವವನ್ನು ಇದರ ಮೂಲಕ ತಿಳಿದುಕೊಳ್ಳಬಹುದು ಎಂದಿದ್ದಾರೆ.