ತೆಂಗಿನ ಮರದ ಗರಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿಸಿಕೊಂಡ ಯುವಕ!|ನೆರೆ ಮನೆಯವನ ಸಮಯಪ್ರಜ್ಞೆಯಿಂದ ಯುವಕ ಪಾರು
ಬೆಳ್ತಂಗಡಿ: ಮನೆಯ ಅಂಗಳದಲ್ಲಿರುವ ತೆಂಗಿನ ಮರದ ಗರಿಯನ್ನು ಕೀಳುವ ಸಂದರ್ಭ ಯುವಕನೋರ್ವ ವಿದ್ಯುತ್ ತಂತಿಗೆ ತಾಗಿಕೊಂಡು ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದು, ನೆರೆಮನೆಯಲ್ಲಿದ್ದ ಯುವಕನು ನೀಡಿದ ಪ್ರಥಮ ಚಿಕಿತ್ಸೆಯಿಂದಾಗಿ ಪ್ರಾಣಾಣಾಪಾಯದಿಂದ ಪಾರಾದ ಘಟನೆ ಇಂದು ನಡೆದಿದೆ.
ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ರಿಜ್ವಾನ್ (28.ವ) ಎಂಬವರು ತನ್ನ ಮನೆಯ ಅಂಗಳದಲ್ಲಿರುವ ತೆಂಗಿನಮರದ ಗರಿಯು ವಿದ್ಯುತ್ ತಂತಿಗೆ ತಾಗಿಕೊಂಡತ್ತಿದ್ದುದನ್ನು ಗಮನಿಸಿ, ಬಿದಿರಿನ
ಕೊಕ್ಕೆಯಿಂದ ಅದನ್ನು ತೆಗೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಅಂಗಳಕ್ಕೆ ಎಸೆಯಲ್ಪಟ್ಟಿದ್ದರು.
ಇದನ್ನು ಕಂಡು ಆತನ ತಾಯಿ ಬೊಬ್ಬೆ ಹೊಡೆದಿದ್ದು, ಪಕ್ಕದ ಮನೆಯಲ್ಲಿ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಉಜಿರೆ ಕುಂಟಿನಿ ನಿವಾಸಿ ಆಸೀಫ್ ಎಂಬವರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಂಭೀರ ಸ್ಥಿತಿಯಲ್ಲಿದ್ದ ರಿಝಾನ್ ರವರಿಗೆ ಸುಮಾರು 20 ನಿಮಿಷಗಳ
ಕಾಲ ನಿರಂತರವಾಗಿ ತಮ್ಮ ಬಾಯಿಯಿಂದ ಕೃತಕ ಉಸಿರಾಟವನ್ನು ನೀಡುವ ಮುಖಾಂತರ ಸಾವಿನಂಚಿನಲ್ಲಿದ್ದ ಯುವಕನ್ನು ಬದುಕಿಸಿ ಜೀವದಾನ ನೀಡಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಿಝಾನ್ ರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸೀಫ್ ರವರ ಸೂಕ್ತ ಸಮಯ ಪ್ರಜ್ಞೆಯಿಂದಾಗಿ ಓರ್ವ ಯುವಕ ಪಾರಾದಂತಾಗಿದೆ.ಆಸೀಫ್ ರವರ ಸತ್ಕರ್ಯದಿಂದಾಗಿ ಸ್ಥಳೀಯರ ಶ್ಲಾಘನೆಗೆ ಪಾತ್ರರಾಗಿದ್ದಾರೆ.