ಕೊರೋನಾ ಲಸಿಕೆ ಬದಲು ರೇಬಿಸ್ ರೋಗ ನಿರೋಧಕ ಲಸಿಕೆ ನೀಡಿದ ವೈದ್ಯರು !! | ವೈದ್ಯರ ಸಮೇತ ದಾದಿಯರನ್ನೂ ಅಮಾನತು ಮಾಡಿದ ಇಲಾಖೆ

ಈಗ ದೇಶದೆಲ್ಲೆಡೆ ಕೊರೋನಾ ಲಸಿಕಾ ಅಭಿಯಾನ ನಡೆಯುತ್ತಿದೆ. ಹಾಗೆಯೇ ಕೊರೋನಾ ಲಸಿಕೆ ಪಡೆಯಲು ತೆರಳಿದ್ದ ವ್ಯಕ್ತಿಯೊಬ್ಬರು ಬೇರೆಯೇ ಲಸಿಕೆ ಪಡೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಆರೋಗ್ಯ ಕೇಂದ್ರವೊಂದರಲ್ಲಿ ವ್ಯಕ್ತಿಗೆ ಕೊರೋನಾ ಲಸಿಕೆ ನೀಡುವ ಬದಲು ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಿದ ಪ್ರಕರಣ ನಡೆದಿದೆ.

ಸೋಮವಾರದಂದು ಸ್ಥಳೀಯ ನಿವಾಸಿ ರಾಜ್‌ಕುಮಾರ್ ಯಾದವ್ ಎನ್ನುವವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕಲ್ವಾ ಪ್ರದೇಶದ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಈ ಅಚಾತುರ್ಯದ ಘಟನೆ ನಡೆದಿದೆ.

ರಾಜ್ ಕುಮಾರ್ ಯಾದವ್ ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬೇರೆ ಸಾಲಿನಲ್ಲಿ ನಿಂತಿದ್ದರು. ಲಸಿಕೆ ಹಾಕಿಸಿಕೊಂಡ ಬಳಿಕ ಅವರಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿಸಲಾಗಿದೆ. ವಿಷಯ ತಿಳಿದ ರಾಜ್ ಕುಮಾರ್ ಯಾದವ್ ಅವರು ಗಾಬರಿಗೊಳಗಾದರು. ಆದರೆ, ಯಾವುದೇ ರೀತಿಯಾದ ಗಂಭೀರ ಪರಿಣಾಮಗಳು ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಠಾಣೆ ಮಹಾನಗರ ಪಾಲಿಕೆಯ ವಕ್ತಾರರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯರು ಹಾಗೂ ದಾದಿಯರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.

Leave A Reply

Your email address will not be published.