ಅಫ್ಘಾನಿಸ್ತಾನದಲ್ಲಿ ಮತ್ತೆ ತಾಂಡವವಾಡುತ್ತಿವೆ ತಾಲಿಬಾನಿಗಳ ದಮನಕಾರಿ ಕಾನೂನುಗಳು | ಕೇಶವಿನ್ಯಾಸ ಹಾಗೂ ಗಡ್ಡ ಶೇವಿಂಗ್ ನಿಷೇಧಿಸಿ ಆದೇಶ ಹೊರಡಿಸಿದ ತಾಲಿಬಾನ್ !!

ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾದಾಗಿನಿಂದ ಇಂದಿನವರೆಗೂ ಹಲವಾರು ನಿಯಮಗಳಿಗೆ ನಿಷೇಧ ಹೇರುತ್ತಲೇ ಬಂದಿದೆ. ಹಾಗೆಯೇ ಇದೀಗ ಹೊಸದೊಂದು ನಿಷೇದಾಜ್ಞೆಯನ್ನು ಹೇರಿದೆ.‌ ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ನಿಷೇಧ ಹೇರಿದ್ದು, ಇನ್ನು ಮುಂದೆ ಗಡ್ಡವನ್ನು ಶೇವಿಂಗ್ ಅಥವಾ ಟ್ರಿಮ್ ಮಾಡುವಂತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಯಾವುದೇ ಕ್ಷೌರದಂಗಡಿಗಳಲ್ಲಿ ವಿಭಿನ್ನ ಕೇಶವಿನ್ಯಾಸ (ಸ್ಟೈಲಿಶ್ ಹೇರ್‌ಸ್ಟೈಲ್ಸ್) ಮತ್ತು ಗಡ್ಡ ಶೇವಿಂಗ್ ಮಾಡುವಂತಿಲ್ಲ ಮತ್ತು ಹೇರ್ ಸಲೂನ್‌ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ ಎಂದು ತಾಲಿಬಾನಿಗಳು ಆದೇಶ ಹೊರಡಿಸಿದ್ದಾರೆ.

ಇನ್ನು ತಾಲಿಬಾನ್ ತನ್ನ ದಮನಕಾರಿ ಕಾನೂನುಗಳು ಮತ್ತು ನೀತಿಗಳನ್ನು ಪುನಃ ಅಫ್ಘಾನ್ ಜನರ ಮೇಲೆ ಹೇರುತ್ತಿದೆ. ಭಾರಿ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹಿಂಸೆಗಳು ತಾಂಡವವಾಡುತ್ತಿವೆ. ಇತ್ತೀಚೆಗಷ್ಟೇ ‌ಅಪಹರಣ ಆರೋಪ ಹೊತ್ತ ನಾಲ್ವರನ್ನು ಕೊಂದು ಸಾರ್ವಜನಿಕ ಪ್ರದೇಶದಲ್ಲೇ ನೇತು ಹಾಕಿದ ಘಟನೆ ಹೆರಾತ್ ನಗರದಲ್ಲಿ ನಡೆದಿತ್ತು.

ಯುಎಸ್ ಮತ್ತು ನ್ಯಾಟೋ ಪಡೆಗಳು ಕಾಬುಲ್‌ನಿಂದ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್ ತನ್ನ ಕರಾಳ ಮುಖವನ್ನು ಒಂದೊಂದಾಗಿ ಕಳಚುತ್ತಾ ಬರುತ್ತಿದೆ. ಧರ್ಮ ಪ್ರತಿಪಾದನೆಯ ಹಾದಿ ಹಿಡಿದಿರುವ ತಾಲಿಬಾನ್ ಹಿಂಸೆ ಪ್ರವೃತ್ತಿಯೊಂದಿಗೆ ಅಫ್ಘಾನ್ ನೆಲವನ್ನು ನರಕವಾಗಿ ಬದಲಾಯಿಸಿದೆ.

Leave A Reply

Your email address will not be published.