ಮಾಂಸಕ್ಕಾಗಿ ಜಾನುವಾರು ಕದ್ದು ಸಾಗಾಟದ ವೇಳೆ ಆಪೆ ರಿಕ್ಷಾ ಪಲ್ಟಿ| ಓರ್ವನ ಸೆರೆ, ಆಪೆ ರಿಕ್ಷಾ ಸಮೇತ ಚಾಲಕ ಪರಾರಿ

ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಯೊಂದನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದೆ. ಈ ಪ್ರಕರಣದಲ್ಲಿ ಆಪೆ ರಿಕ್ಷಾ ಚಾಲಕ ರಿಕ್ಷಾ ಸಮೇತ ಪರಾರಿಯಾಗಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದ ಕೊಕ್ಕಡ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆಲಂಕಾರಿನಿಂದ ಹೋರಿ ಹಾಗೂ ದನವೊಂದನ್ನು ಕದ್ದು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಕೊಕ್ಕಡಕ್ಕೆ ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾ(ಕೆಎ 21 ಬಿ 1958) ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿದೆ.

ಬಳಿಕ ಆರೋಪಿಗಳು ಪಲ್ಟಿಯಾಗಿದ್ದ ರಿಕ್ಷಾವನ್ನು ನಿಲ್ಲಿಸಿ ಕೆಳಕ್ಕೆ ಬಿದ್ದಿದ್ದ ದನ ಮತ್ತು ಹೋರಿಯನ್ನು ಪುನ: ಆಪೆ ರಿಕ್ಷಾದಲ್ಲಿ ತುಂಬಿಸಲು ಮುಂದಾಗಿದ್ದರು. ಈ ವೇಳೆ ಜನ ಸೇರುತ್ತಿದ್ದಂತೆ ಆಪೆ ರಿಕ್ಷಾ ಚಾಲಕ ಸಫೀಕ್ ಎಂಬಾತ ರಿಕ್ಷಾ ಸಮೇತ ಪರಾರಿಯಾಗಿದ್ದಾನೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇನ್ನೋರ್ವ ಆರೋಪಿ ಕೊಕ್ಕಡ ಗ್ರಾಮದ ಪಿಜಿನಡ್ಕ ನಿವಾಸಿ ಗುರುಪ್ರಸಾದ್(20ವ.)ಎಂಬಾತನನ್ನು ವಶಕ್ಕೆ ಪಡೆದು ದನ ಹಾಗೂ ಹೋರಿಯನ್ನು ರಕ್ಷಿಸಿದ್ದಾರೆ.

ಸ್ಥಳದಲ್ಲಿ ಪತ್ತೆಯಾದ ಆರೋಪಿಯ ಅಂಡ್ರಾಯ್ಡ್ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ದನ ಮತ್ತು ಹೋರಿಯ ಮೌಲ್ಯ ರೂ.22 ಸಾವಿರ ಎಂದು ಅಂದಾಜಿಸಲಾಗಿದೆ. ಘಟನೆ ಕುರಿತಂತೆ ನೆಲ್ಯಾಡಿ ಗ್ರಾಮದ ತೋಟ ನಿವಾಸಿ ಚೇತನ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.