ಎಲ್ಲಾ ಚಾಲಕರನ್ನು ನಿಬ್ಬೆರಗಾಗಿಸಿದೆ 90ರ ಹರೆಯದ ಅಜ್ಜಿಯ ಕಾರು ಚಾಲನೆ!!
ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬುದು ನೂರಕ್ಕೆ ನೂರು ಸತ್ಯದ ಮಾತು. ಎಷ್ಟೋ ಜನ ತಮ್ಮ ಇಳಿವಯಸ್ಸಿನಲ್ಲೂ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಇಂತಹ ಪಟ್ಟಿಯಲ್ಲಿ ಇದೀಗ ಹೊಸ ಸೇರ್ಪಡೆಯೊಂದು ಮಧ್ಯಪ್ರದೇಶದಲ್ಲಿ ಆಗಿದೆ.
ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ 90 ವರ್ಷದ ವೃದ್ಧೆ ಇಳಿವಯಸ್ಸಿನಲ್ಲೂ ಕಾರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಜ್ಜಿ ಇದೀಗ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ವೃದ್ಧೆಯ ಹೆಸರು ರೇಷಮ್ ಬಾಯ್ ತನ್ವರ್. ಇವರು ದೇವಾಸ್ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿ. ಅವರ ಇಡೀ ಕುಟುಂಬ ಚಾಲನಾ ಕೌಶಲ್ಯ ಹೊಂದಿರುವುದರಿಂದ ವೃದ್ಧೆಯು ಕೂಡ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತುಕೊಂಡಿದ್ದಾರೆ.
ನನ್ನ ಮಗಳು ಮತ್ತು ಸೊಸೆಯರು ಸೇರಿದಂತೆ ಕುಟುಂಬದ ಎಲ್ಲಿರಿಗೂ ಡ್ರೈವಿಂಗ್ ಗೊತ್ತು. ಹೀಗಾಗಿ ನಾನು ಸಹ ಡ್ರೈವಿಂಗ್ ಕಲಿತೆ. ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರು ಮತ್ತು ಟ್ರಾಕ್ಟರುಗಳನ್ನು ಓಡಿಸಿದ್ದೇನೆ ಎಂದು ಜಿಲ್ಲೆಯ ಬಿಲಾವಲಿ ಪ್ರದೇಶದ ನಿವಾಸಿ ರೇಶಮ್ ಬಾಯಿ ತನ್ವಾರ್ ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವೃದ್ಧಾಪ್ಯದಲ್ಲೂ ಕಾರು ಚಾಲನೆ ಕಲಿತ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ. ನಮ್ಮ ಆಸಕ್ತಿಯನ್ನು ಪೂರೈಸಿಕೊಳ್ಳಲು ವಯಸ್ಸಿನ ನಿರ್ಬಂಧವಿಲ್ಲ. ಈ ಅಜ್ಜಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಅದೆಷ್ಟೋ ಮಂದಿಗೆ ಈ ಅಜ್ಜಿ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಈ ಸಾಧನೆ ಮಾಡಲು ಇವರಿಗೆ ಪ್ರೋತ್ಸಾಹ ನೀಡಿದ ಅವರ ಕುಟುಂಬಕ್ಕೊಂದು ಹ್ಯಾಟ್ಸಾಫ್ ಹೇಳಲೇಬೇಕು.