ಪುತ್ತೂರು | ಕಡಿಮೆ ಬಡ್ಡಿಯಲ್ಲಿ ಲೋನ್ ಸಿಗುವುದೆಂಬ ಜಾಹೀರಾತನ್ನು ನಂಬಿ 7.24 ಲಕ್ಷ ರೂ ಕಳೆದುಕೊಂಡ ವ್ಯಕ್ತಿ , ಸೈಬರ್ ಠಾಣೆಯಲ್ಲಿ ದೂರು ದಾಖಲು

ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಲಾಗುವುದು ಎಂದು ಮೊಬೈಲ್‌ಗೆ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು ಎರಡು ಕಡೆ 7.24 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.

ಪುತ್ತೂರಿನ ರಾಮಕುಂಜದ ವ್ಯಕ್ತಿಗೆ ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿಮಿಟೆಡ್‌ನ ಹೆಸರಿನಲ್ಲಿ ಲೋನ್ ಅಪ್ಲೈಗಾಗಿ ಜನವರಿಯಲ್ಲಿ ಸಂದೇಶ ಬಂದಿತ್ತು. ಅದರಲ್ಲಿ ಸೂಚಿಸಿದಂತೆ ಪೋನ್ ನಂಬರ್‌ಗೆ ಕರೆ ಮಾಡಿದಾಗ ಈ ವ್ಯಕ್ತಿಗೆ ಶೇಕಡಾ 5 ರ ಬಡ್ಡಿಯಲ್ಲಿ 5 ಲಕ್ಷ ಸಾಲ ನೀಡುವುದಾಗಿ ತಿಳಿಸಿದ್ದರು.

ಅವರ ಸೂಚನೆಯಂತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಕಳುಹಿಸಿದ್ದರು. ಬಳಿಕ ವಿವಿಧ ಮೊಬೈಲ್‌ಗಳಿಂದ ಕರೆ ಮಾಡಿ ರಿಜಿಸ್ಟ್ರೇಷನ್, ಜಿಎಸ್‌ಟಿ ಮತ್ತು ವಿವಿಧ ಶುಲ್ಕಗಳೆಂದು ಹೇಳಿ ಹಂತ ಹಂತವಾಗಿ 5,20,727 ರೂ. ವರ್ಗಾಯಿಸಿಕೊಂಡಿದ್ದರು.

ಇದರ ನಡುವೆ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಲೋನ್ ನೀಡುವ ಸಂದೇಶ ಬಂದಿದೆ. ಅದಕ್ಕೆ ಕರೆ ಮಾಡಿದಾಗ ಶೇಕಡಾ 5 ರ ಬಡ್ಡಿಯಲ್ಲಿ 9 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಪಡೆದುಕೊಂಡಿದ್ದಾರೆ. ಬಳಿಕ ರಿಜಿಸ್ಟ್ರೇಷನ್, ಜಿಎಸ್ಟಿ ಮತ್ತು ವಿವಿಧ ಹೇಳಿ ಹಂತ ಹಂತವಾಗಿ 2,03,598 ರೂ. ಹಣ ಟ್ರಾನ್ಸ್ಫರ್ ಮಾಡಿಸಿದ್ದಾರೆ. ಹೀಗೆ ಎರಡು ಕಡೆಯಿಂದ ಶೇಕಡಾ 5 ರ ಬಡ್ಡಿಯಲ್ಲಿ ಸಾಲ ಪಡೆಯಲು 7,24,325 ರೂ. ಟ್ರಾನ್ಸ್ಫರ್ ಮಾಡಿದ್ದಾರೆ.

ನಂತರ ತಾನು ಮೋಸ ಹೋಗಿರುವುದು ವ್ಯಕ್ತಿಗೆ ತಿಳಿದುಬಂದಿದೆ. ಬಳಿಕ ಆ ವ್ಯಕ್ತಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.