ಕರಾವಳಿಯ ಮತ್ಸ್ಯ ಪ್ರಿಯರಿಗೆ ಸಿಹಿಸುದ್ದಿ!!ಊಟದ ಜೊತೆಗೆ ಸವೆಯುತ್ತಿದ್ದ ಮೀನು ಇನ್ನು ಮುಂದೆ ಚಹಾದೊಂದಿಗೂ ಸವೆಯಲು ರೆಡಿ

ಕರಾವಳಿ ಅಂದಾಗ ತಕ್ಷಣ ನೆನಪಾಗುವುದು ಮಂಗಳೂರು. ಅದರಲ್ಲೂ ಮಂಗಳೂರಿಗೆ ಬಂದಾತ ಮೀನು ಸವಿಯದೆ ಹೋಗುವ ಹಿಸ್ಟ್ರಿ ಯೇ ಇಲ್ಲವೇನೋ ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿ ಪ್ರತೀ ಮನೆಯ, ಪ್ರತೀ ಹೋಟೆಲ್ ಗಳ ಅನ್ನದ ತಟ್ಟೆಯಲ್ಲಿ ಮೀನು ಗಸಿ, ಮೀನು ಫ್ರೈ ಇದ್ದೇ ಇರುತ್ತದೆ. ಹಸಿಮೀನು, ಒಣಮೀನು ಮಾರಾಟ ಇಲ್ಲಿನ ವ್ಯಾಪಾರಿಗಳ ಕೈಹಿಡಿದ ಉದ್ಯಮ. ಇಷ್ಟು ದಿನ ಕೇವಲ ಮೀನು ಊಟದ ರುಚಿ ಕಂಡ ಕರಾವಳಿಗರಿಗೆ ಇನ್ನು ಚಹಾದ ಜೊತೆಗೆ ಮೀನಿನ ತಿಂಡಿ ಸವಿಯಲು ತಯಾಗಿರುವುದು ಅಚ್ಚರಿಯ ಜೊತೆಗೆ ಖುಷಿಯ ಸಂಗತಿ. ಕೇವಲ ನಾಲ್ಕು ಜನ ಮಹಿಳೆಯರು ಸೇರಿ ತಯಾರಿಸಿದ ಮೀನಿನ ತಿಂಡಿ(ಮೀನು ಚಕ್ಕುಲಿ)ಸದ್ಯ ಕರಾವಳಿಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಅದರಲ್ಲೂ ಬಾರ್&ರೆಸ್ಟೋರೆಂಟ್ ಗಳಲ್ಲಿ ಮೀನು ಚಕ್ಕುಲಿಗೆ ಹೆಚ್ಚಿನ ಬೇಡಿಕೆ ಸಿಕ್ಕಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ದ ಸಮಗ್ರ ಸಂಜೀವಿನಿ ಒಕ್ಕೂಟದ ಸ್ನೇಹ ಸ್ವ ಸಹಾಯ ಸಂಘದ ಸದಸ್ಯೆಯರಾದ ಸಾವಿತ್ರಿ ಎಚ್.ಎಸ್, ಶಾಹಿದ ಬೇಗಂ, ನಸೀಮಾ ಹಾಗೂ ಹರ್ಷಿಯಾ ಎಂಬ ಮಹಿಳೆಯರು ಕೇವಲ 18 ದಿನಗಳಲ್ಲಿ ಸುಮಾರು 45ಕೆಜಿ ಯಷ್ಟು ಮೀನು ಚಕ್ಕುಲಿ ತಯಾರಿಸಿ ಮಾರಾಟ ನಡೆಸಿದ್ದಾರೆ.ನಾಲ್ಕು ತರದ ಖಾದ್ಯಗಳಿದ್ದು ಮೀನಿನ ಪಾಲಕ್ ಮೀನಿನ ಪೆಪ್ಪರ್, ಮೀನಿನ ಖಾರ, ಮೀನಿನ ಸಾದಾ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು 100 ಗ್ರಾಂ ನ ಬೆಲೆ 35 ರೂಪಾಯಿ ಇದೆ.

‘ಸ್ವ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಚಕ್ಕುಲಿ ತಯಾರಿಕೆ, ಅಣಬೆ ಕೃಷಿ, ಮೀನು ಸಾಕಣೆ, ಮಸಾಲೆ ಹುಡಿ ತಯಾರಿಕೆ ಹೀಗೆ ಪ್ರತ್ಯೇಕವಾಗಿ ಗೃಹೋದ್ಯಮ ನಡೆಸುತ್ತಿದ್ದ ಮಹಿಳೆಯರು ಆಗಸ್ಟ್‌ನಲ್ಲಿ ಮೀನುಗಾರಿಕಾ ಕಾಲೇಜು ಮತ್ತು ನಬಾರ್ಡ್ ನೀಡಿದ ಮೀನು ಉತ್ಪನ್ನಗಳ ಸಿದ್ಧತಾ ತರಬೇತಿಯಲ್ಲಿ ಚಕ್ಕುಲಿ ತಯಾರಿಕೆಯನ್ನು ಕಲಿತಿದ್ದರು.ಕಲಿತ ವಿದ್ಯೆಯನ್ನು ಕಾರ್ಯಗತಗೊಳಿಸಲು 725 ಸಾವಿರ ಬಂಡವಾಳ ಹಾಕಿ, ಉದ್ಯಮ ಪ್ರಾರಂಭಿಸಿದ್ದೇವೆ’ ಎಂದು ಸದಸ್ಯೆ ಸಾವಿತ್ರಿ ತಿಳಿಸಿದ್ದಾರೆ.

‘ಮಂಗಳೂರು ನಗರ, ಸ್ಥಳೀಯ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಉತ್ಪನ್ನಗಳು ಗ್ರಾಹಕರ ಮನಗೆದ್ದಿವೆ. ರಾಣಿ ಮೀನಿನ (ಮದ್ಮಲ್) ಮೀಟ್ ಜತೆಗೆ ಅಕ್ಕಿಹಿಟ್ಟು, ಹುರಿಗಡಲೆ ಹಿಟ್ಟು, ಉದ್ದಿನ ಬೇಳೆ, ಜೀರಿಗೆ, ಓಂಕಾಳು ಬಳಸಿ ತಯಾರಿಸುವ ಚಕ್ಕುಲಿ ತಿಂದರೆ, ಮೀನು ತಿಂದ ಸ್ವಾದ ಸಿಗುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯ’ ಎಂದು ಹರ್ಷಿಯಾ ಪ್ರತಿಕ್ರಿಯಿಸಿದ್ದಾರೆ.

‘ಮೀನಿನ ಕೋಡುಬಳೆ, ಹಪ್ಪಳ, ಸಂಡಿಗೆ ಮತ್ತಿತರ ಉತ್ಪನ್ನಗಳನ್ನು ತಯಾರಿಸಿದ್ದೇವೆ. ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ನಮಗೆ ಪ್ರೋತ್ಸಾಹ ನೀಡಿರುವುದು ಬಲ ಹೆಚ್ಚಿಸಿದೆ’ ಎಂದು ಶಾಹಿದಾ ಬೇಗಂ, ನಸೀಮಾ ಹೇಳಿದರು.

ರಾಣಿ ಮೀನಿನ ಮೀಟ್ ಜತೆಗೆ ವಿವಿಧ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಈ ಮೌಲ್ಯವರ್ಧಿತ ಉತ್ಪನ್ನವನ್ನು 45ರಿಂದ 50 ದಿನಗಳವರೆಗೆ ಕೆಡದಂತೆ ಇಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :-ಸಾವಿತ್ರಿ ಎಚ್.ಎಸ್., ಚಕ್ಕುಲಿ ತಯಾರಕಿ

ಸಂಪರ್ಕ ಸಂಖ್ಯೆ: 9980887012, 8050727601.

Leave A Reply

Your email address will not be published.