ಹಿಂದೂ ಸಂಪ್ರದಾಯದಲ್ಲಿನ “ಕನ್ಯಾದಾನ” ದ ಬಗ್ಗೆ ಪ್ರಶ್ನಿಸಿದ ನಟಿ ಆಲಿಯಾ ಭಟ್ !! | ನಟಿಗೆ ನೆಟ್ಟಿಗರಿಂದ ಮೂದಲಿಕೆಯ ಸುರಿಮಳೆ

ಈಗ ಯಾವುದೇ ವಿಷಯವಿರಲಿ ಅದು ದೇಶದ ಯಾವುದೇ ಒಂದು ಮೂಲೆಯಲ್ಲಿ ನಡೆದರೂ, ಇನ್ನೊಂದು ಮೂಲೆಯಲ್ಲಿರುವ ಜನರಿಗೂ ಅದು ತಲುಪೇ ತಲುಪುತ್ತದೆ. ಅದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವೂ ಈಗ ಹೇರಳವಾಗಿದೆ.

 

ಇತ್ತೀಚಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿ, ಜಾಹೀರಾತು ಮೂಲಕ ತೋರಿಸಲಾಗುತ್ತಿರುವ ಕಂಟೆಂಟ್ ಗಳು ಯಾರ ನಂಬಿಕೆಗಳಿಗೂ ಧಕ್ಕೆ ತರುತ್ತಿಲ್ಲವೇ? ಯಾರ ನಂಬಿಕೆಯನ್ನೂ ಪ್ರಶ್ನೆ ಮಾಡುತ್ತಿಲ್ಲವೇ? ಯಾವುದೊ ಒಂದು ಪಂಥದ ಪರವಾಗಿ ನಿಲ್ಲುತ್ತಿಲ್ಲವೆ? ಯಾರನ್ನೂ ವ್ಯಂಗ್ಯ ಮಾಡುತ್ತಿಲ್ಲವೆ? ಎಂಬುದನ್ನು ಹಲವು ಬಾರಿ ಪರೀಕ್ಷಿಸಿಕೊಳ್ಳಬೇಕಾಗಿದೆ. ಪ್ರತಿಯೊಂದು ವಿಷಯಕ್ಕೂ ತಮ್ಮ ಅಭಿಪ್ರಾಯ, ಭಿನ್ನಾಭಿಪ್ರಾಯ, ಮೂದಲಿಕೆ, ಟ್ರೋಲ್, ವ್ಯಂಗ್ಯ ಮಾಡಲು ಸನ್ನದ್ಧವಾಗಿ ಮೊಬೈಲ್ ಹಿಡಿದು ಕೂತಿರುವ ನೆಟ್ಟಿಗರಿಂದಾಗಿ ಸಿನಿಮಾ, ಧಾರಾವಾಹಿ, ಜಾಹಿರಾತು ಬರಹಗಾರರಿಗೆ ಇದು ಬಹಳ ಸೂಕ್ಷ್ಮಕಾಲವಾಗಿಬಿಟ್ಟಿದೆ.

ಇದೀಗ ಆಲಿಯಾ ಭಟ್‌ರ ಹೊಸ ಜಾಹೀರಾತೊಂದು ಬಿಡುಗಡೆ ಆಗಿದೆ. ಮಹಿಳೆಯರ ಪರವಾದ ವಿಷಯವೊಂದನ್ನು ಇಟ್ಟುಕೊಂಡು ಜಾಹೀರಾತನ್ನು ರೂಪಿಸಲಾಗಿದೆ. ಜಾಹೀರಾತು ಬಹಳ ಚೆನ್ನಾಗಿದೆ ಹಾಗೆಯೇ ವಿವಾದದ ಪ್ರಶ್ನೆಯೊಂದನ್ನು ಎತ್ತಿ ಹಿಡಿದಿದ್ದು, ಈ ಬಗ್ಗೆ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್, ಮೋಹೆಯ್ ಫ್ಯಾಷನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಆಲಿಯಾ ಭಟ್ ಹಸೆ ಮಣೆ ಮೇಲೆ ಕುಳಿತು, ಸ್ತ್ರೀ ಹೇಗೆ ಬೇರೆ ಮನೆಗೆ ಹೋಗುವಳು, ಬೇರೆ ಮನೆ ಬೆಳಗುವಳು ಇನ್ನಿತರೆ ಮಾತುಗಳನ್ನು ಸ್ವಂತ ಮನೆಯವರೇ ಹೇಳುತ್ತಾರೆ. ನಾನೇನು ವಸ್ತುವೇ ನನ್ನನ್ನು ‘ದಾನ’ ಮಾಡಲು, ಈ ‘ಕನ್ಯಾದಾನ’ ಪದ್ಧತಿ ಏಕೆ, ಕನ್ಯಾಮಾನ ಎಂದೇಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ.

ಆಲಿಯಾ ಭಟ್ ಮೇಲೆ ಮೂದಲಿಕೆಗಳ ಸುರಿಮಳೆ

ಇದೀಗ ‌ನೆಟ್ಟಿಗರು ಜಾಹೀರಾತಿನ ಬಗ್ಗೆ ಆಕ್ಷೇಪ ತೆಗೆದಿದ್ದು, ಕನ್ಯಾದಾನದ ಬಗ್ಗೆಯೇ ಏಕೆ ಪ್ರಶ್ನೆ ಮಾಡುತ್ತೀರಿ, ತ್ರಿವಳಿ ತಲಾಖ್ ಬಗ್ಗೆಯೂ ಪ್ರಶ್ನೆ ಮಾಡಿ ಎಂದಿದ್ದಾರೆ. ಒಂದು ಹಂತಕ್ಕೆ ಇದು ನಿಜ. ಏಕೆಂದರೆ ತ್ರಿವಳಿ ತಲಾಖ್ ತುಂಬಾ ಅಮಾನವೀಯ ಪದ್ಧತಿ. ಆದರೆ ಕನ್ಯಾದಾನ ಪದ್ಧತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಆಲಿಯಾ ಭಟ್ ಮೇಲೆ ಮೂದಲಿಕೆಗಳ ಸುರಿಮಳೆಯೇ ಆಗುತ್ತಿದೆ.

”ಕ್ರಿಶ್ಚಿಯನ್‌ ಪದ್ಧತಿಯಲ್ಲಿಯೂ ವಧುವಿನ ತಂದೆ ಮಗಳ ಕೈಯನ್ನು ವರನ ಕೈಗೆ ಕೊಡುತ್ತಾನೆ. ಅದನ್ನು ‘ವಾವ್’ ಎಂದು ನೋಡಿ ಖುಷಿ ಪಡುವ ನೀವು ಹಿಂದು ಪದ್ಧತಿ ಬಗ್ಗೆ ಮಾತ್ರವೇ ಪ್ರಶ್ನೆ ಮಾಡುತ್ತೀರಿ” ಎಂದು ಪ್ರಯಾಗ್ ರಾಜ್ ಎಂಬುವರು ಪ್ರಶ್ನೆ ಮಾಡಿದ್ದಾರೆ. ಇಂಥಹಾ ಹಲವು ಕಮೆಂಟ್‌ಗಳು ಜಾಹೀರಾತಿನ ವಿಡಿಯೋಕ್ಕೆ ಬಂದಿದೆ. ಹಿಂದು ಧರ್ಮದ ಬಗ್ಗೆ ಮಾತ್ರವೇ ಏಕೆ ಪ್ರಶ್ನೆಗಳನ್ನು ಮಾಡಲಾಗುತ್ತದೆ. ಕ್ರಿಶ್ಚಿಯನ್, ಮುಸ್ಲಿಂ ಧರ್ಮದಲ್ಲಿರುವ ಹುಳುಕುಗಳ ಬಗ್ಗೆ ಏಕೆ ಬಾಲಿವುಡ್ಡಿಗರು ಪ್ರಶ್ನೆ ಮಾಡುವುದಿಲ್ಲ ಎಂದು ಸಹ ಕೆಲವರು ಕಮೆಂಟ್ ಮಾಡಿದ್ದಾರೆ.

ಭೂತ್ ಪೊಲೀಸ್ ಪೋಸ್ಟರ್‌ ಬಗ್ಗೆ ಆಕ್ಷೇಪ

ಕೆಲವು ದಿನಗಳ ಹಿಂದೆ ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ನಟಿಸಿದ್ದ ‘ಭೂತ್ ಪೊಲೀಸ್’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದಾಗಲೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೋಸ್ಟರ್‌ನಲ್ಲಿ ಸಾಧುವೊಬ್ಬರ ಚಿತ್ರ ಬಳಸಲಾಗಿತ್ತು. ಏಕೆ ಸಾಧುವಿನ ಚಿತ್ರವನ್ನೇ ಬಳಸಿದ್ದೀರಿ, ಮುಲ್ಲಾ ಚಿತ್ರವನ್ನೇ ಬಳಸಿಲ್ಲ ಅಥವಾ ಪಾದ್ರಿಯ ಚಿತ್ರವನ್ನೇಕೆ ಬಳಸಿಲ್ಲ ಎಂದು ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.

ದೊಡ್ಡ ವಿವಾದ ಎಬ್ಬಿಸಿದ್ದ ‘ತಾಂಡವ್’

‘ತಾಂಡವ್’ ವೆಬ್ ಸರಣಿಯದ್ದು ಬಹಳ ದೊಡ್ಡ ವಿವಾದವೇ ಆಗಿತ್ತು. ವೆಬ್ ಸರಣಿಯಲ್ಲಿ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಹಲವರು ದೂರು ನೀಡಿದ್ದರು. ಬಿಜೆಪಿ ಸಂಸದರೊಬ್ಬರು ಸಹ ದೂರು ದಾಖಲಿಸಿದ್ದರು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ನಿರ್ದೇಶಕ, ನಿರ್ಮಾಪಕರಿಗೆ ನೊಟೀಸ್ ಜಾರಿ ಮಾಡಿತ್ತು. ನಿರ್ದೇಶಕ ಹಾಗೂ ನಿರ್ಮಾಪಕರು ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು. ಆ ವೇಳೆಗೆ ಅಮೆಜಾನ್ ಪ್ರೈಂ ಬಹಿರಂಗ ಕ್ಷಮೆ ಕೋರಿ ವಿವಾದಕ್ಕೆ ಕಾರಣವಾಗಿದ್ದ ದೃಶ್ಯಗಳನ್ನು ಡಿಲೀಟ್ ಮಾಡಿತು.

ಹೀಗೆ ಜಾಹೀರಾತು, ವೆಬ್ ಸರಣಿ ಹಾಗೂ ಚಲನಚಿತ್ರಗಳಲ್ಲಿ ಈ ರೀತಿಯ ಅವಗಹಣೆಗಳು ಪದೇಪದೇ ನಡೆಯುತ್ತಿವೆ. ಈ ರೀತಿಯ ಯಾವುದೇ ಚಲನಚಿತ್ರವಿರಲಿ ಅಥವಾ ಜಾಹೀರಾತಾಗಿರಲಿ ಅದನ್ನು ನಿರ್ದೇಶಿಸುವಾಗಲೇ ಯಾವುದೇ ಧರ್ಮಕ್ಕೆ ಚ್ಯುತಿ ಆಗದಂತೆ ನೋಡಿಕೊಳ್ಳುವುದು ನಿರ್ದೇಶಕರ ಕರ್ತವ್ಯವಾಗಿರುತ್ತದೆ. ಅದನ್ನು ಪಾಲಿಸಿಕೊಂಡು ಹೋದರೆ ಈ ರೀತಿಯ ಯಾವುದೇ ಪ್ರಶ್ನೆಗಳನ್ನು ಎದುರಿಸುವ ಸಂದರ್ಭ ಎದುರಾಗುವುದಿಲ್ಲ.

Leave A Reply

Your email address will not be published.