ಕ್ರಿಕೆಟ್ ನಲ್ಲಿ ಇನ್ನು ಮುಂದೆ ಕಾಣಲು ಸಿಗುವುದಿಲ್ಲ ಬ್ಯಾಟ್ಸ್‌ಮನ್ !! ಬ್ಯಾಟ್ಸ್‌ಮನ್ ಪದ ಬಳಕೆಯನ್ನು ನಿಷೇಧಿಸಿದ ಎಂಸಿಸಿ

ಕ್ರಿಕೆಟ್ ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್ಮನ್ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ ‘ಬ್ಯಾಟರ್’ ಎಂದು ತಕ್ಷಣಕ್ಕೆ ಜಾರಿಗೆ ಬರುವಂತೆ ಕ್ರಿಕೆಟ್ ಕಾನೂನುಗಳನ್ನು ರಚಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬುಧವಾರ ಘೋಷಣೆ ಮಾಡಿದೆ.

ಕ್ರಿಕೆಟ್ ಆಟದ ನಿಯಮಾವಳಿಯಲ್ಲಿ ಲಿಂಗ ಸಮಾನತೆ ತರುವ ಸಲುವಾಗಿ ಮೆರಿಲ್‌ಬೋನ್‌ ಕ್ರಿಕೆಟ್ ಕ್ಲಬ್ ಈ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.

ಕ್ರಿಕೆಟ್ ಆಟದಲ್ಲಿ ಇನ್ನು ಬ್ಯಾಟಿಂಗ್ ಮಾಡುವವರನ್ನು ‘ಬ್ಯಾಟ್ಸ್‌ಮನ್’ ಎಂದು ಕರೆಯಲಾಗುವುದಿಲ್ಲ. ಅದಕ್ಕೆ ಬದಲಾಗಿ ತಕ್ಷಣದಿಂದಲೇ ಅನ್ವಯಿಸುವಂತೆ ‘ಬ್ಯಾಟರ್’ ಎಂಬ ಪದವನ್ನು ಕ್ರಿಕೆಟ್ ನಿಯಮಾವಳಿಯಲ್ಲಿ ಅಳವಡಿಸಲಾಗಿದೆ. ಇದರಿಂದ ಕ್ರಿಕೆಟ್ ಆಟದ ನಿಯಮವಿನ್ನು ಪುರುಷ ಪ್ರಧಾನವಾಗಿರದೆ, ಲಿಂಗ ತಟಸ್ಥವಾಗಿರಲಿದೆ.

ಎಂಸಿಸಿ ಕ್ರಿಕೆಟ್ ನಿಯಮಗಳ ರಕ್ಷಕನಾಗಿದ್ದು, ಐಸಿಸಿ ಕೂಡ ಅದು ಜಾರಿಗೊಳಿಸುವ ನಿಯಮಗಳನ್ನೇ ಪಾಲಿಸುತ್ತದೆ. ಕ್ರಿಕೆಟ್‌ನ ಮೂಲ ನಿಯಮಗಳನ್ನು ಬದಲಾಯಿಸುವ ಹಕ್ಕು ಐಸಿಸಿಗೂ ಇರುವುದಿಲ್ಲ. ಅದು ಎಂಸಿಸಿ ತರುವ ಬದಲಾವಣೆಯನ್ನಷ್ಟೇ ಅಳವಡಿಸಿಕೊಳ್ಳಬಹುದಾಗಿದೆ. ಎಂಸಿಸಿಯ ಕಾನೂನು ಉಪ-ಸಮಿತಿಯ ಜೊತೆ ಚರ್ಚಿಸಿ ಎಂಸಿಸಿ ಸಮಿತಿ ಈ ಪದ ಬದಲಾವಣೆಯನ್ನು ಬುಧವಾರ ಅಂಗೀಕರಿಸಿದೆ.

‘ಈ ಲಿಂಗ-ತಟಸ್ಥತೆಯ ಪರಿಭಾಷೆಯಿಂದ ಕ್ರಿಕೆಟ್ ಆಟ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಆಟವೆಂಬ ವರ್ಚಸ್ಸು ಪಡೆದುಕೊಳ್ಳಲು ನೆರವಾಗಲಿದೆ. ಈ ಪದ ಬದಲಾವಣೆಯು ಲಿಂಗ ಸಮಾನತೆಗಾಗಿ ಶ್ರಮಿಸುವ ಎಂಸಿಸಿಯ ಸಂಕಲ್ಪದ ಸಹಜ ಪ್ರಕ್ರಿಯೆವಾಗಿದೆ’ ಎಂದು ಎಂಸಿಸಿ ತಿಳಿಸಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಎಲ್ಲ ಮಟ್ಟದಲ್ಲೂ ಸಾಕಷ್ಟು ಅಭಿವೃದ್ಧಿ ಮತ್ತು ಜನಪ್ರಿಯತೆಯನ್ನು ಕಾಣುತ್ತಿದ್ದು, ಮಹಿಳೆಯರು ಮತ್ತು ಬಾಲಕಿಯರ ಹೆಚ್ಚಿನ ಸಂಖ್ಯೆಯಲ್ಲಿ ಈ ಆಟವನ್ನು ಆಡುವಂತೆ ಮಾಡಲು ಲಿಂಗ ತಟಸ್ಥ ಪದಗಳನ್ನು ಅಳವಡಿಸಿಕೊಳ್ಳಲು ಬೇಡಿಕೆ ಕೇಳಿಬಂದಿದ್ದವು.

ಬೌಲರ್ ಮತ್ತು ಫೀಲ್ಡರ್ ಪದಗಳು ಈಗಾಗಲೆ ಲಿಂಗ ತಟಸ್ಥತೆಯಿಂದ ಕೂಡಿದ್ದರೆ, ‘ಬ್ಯಾಟ್ಸ್‌ಮನ್’ ಅಥವಾ ‘ಬ್ಯಾಟ್ಸ್‌ಮೆನ್’ ಪದವು ಪುರುಷ ಪ್ರಧಾನ ಆಟವೆಂಬಂತೆ ಪ್ರತಿಬಿಂಬಿಸುತ್ತಿತ್ತು. ಆದರೆ ಬ್ಯಾಟರ್ ಅಥವಾ ಬ್ಯಾಟರ್ಸ್ ಪದದಿಂದ ಕ್ರಿಕೆಟ್ ಆಟವೀಗ ಸಂಪೂರ್ಣ ಲಿಂಗ ಸಮಾನತೆ ಕಂಡಿದೆ.

Leave A Reply

Your email address will not be published.