ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಬೆಂಕಿ ಅವಘಡ !! ಹಸುಗೂಸುಗಳು ಒಂದೆಡೆಯಾದರೆ ಇನ್ನೇನು ತಾಯಿಯ ಹೊಟ್ಟೆಯಿಂದ ಬಂದು ಜಗತ್ತು ನೋಡಬೇಕಾದ ಕಂದಮ್ಮಗಳು ಇನ್ನೊಂದೆಡೆ

ಒಂದೆಡೆ ಹಸುಗೂಸನ್ನು ಬಿಗಿದಪ್ಪಿಕೊಂಡು ಚೀರಾಡುತ್ತಾ ಬಾಣಂತಿಯರು ಓಡೋಡಿ ಬರುತ್ತಿದ್ದರೆ, ಇನ್ನೊಂದೆಡೆ ಗರ್ಭಿಣಿಯರು ಜೀವಭಯದಲ್ಲೇ ವೇಗವಾಗಿ ಹೆಜ್ಜೆಯನ್ನಿಟ್ಟು ಕೈ ಬೀಸಿ ಸಹಾಯ ಕೋರುತ್ತಿದ್ದ ಹೃದಯವಿದ್ರಾವಕ ದೃಶ್ಯ ಹಾವೇರಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಕಂಡುಬಂದಿದೆ.

ಇದಕ್ಕೆ ಕಾರಣ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಹೆರಿಗೆ ವಾರ್ಡ್ ಹೊತ್ತಿ ಉರಿದದ್ದು. ಹಸು ಗೂಸುಗಳನ್ನು ಎತ್ತಿಕೊಂಡು ಬಾಣಂತಿಯರು, ಗರ್ಭಿಣಿಯರು ಹೊರ ಓಡಿ ಬಂದು ನಿಟ್ಟುಸಿರುಬಿಟ್ಟರು.ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಯ ಮುಂಭಾಗವೇ ನೂರಕ್ಕೂ ಹೆಚ್ಚು ಬಾಣಂತಿಯರು ಕೂತು ಕಣ್ಣೀರಿಟ್ಟರು. ಸೂಕ್ತ ವ್ಯವಸ್ಥೆ ಇಲ್ಲದೆ ಆಸ್ಪತ್ರೆ ಆವರಣದಲ್ಲೇ ಕೆಲಕಾಲ ಬಾಣಂತಿಯರು ಮಲಗಿದರು.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.ಸದ್ಯಕ್ಕೆ ಯಾರಿಗೂ ಏನೂ ತೊಂದರೆಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರೂ ಹೊರಗೋಡಿ ಬಂದ ಕಾರಣ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

Leave A Reply

Your email address will not be published.