ಡಿಜಿಟಲ್ ಪೇಮೆಂಟ್ ಅಂಚೆ ಇಲಾಖೆಯ ಡಾಕ್ ಪೇ ಮೂಲಕ ಇನ್ನಷ್ಟು ಸುಲಭ | ಯಾವುದೇ ಬ್ಯಾಂಕ್ನ ಖಾತೆಯಿದ್ದರೂ ಈ ಸೇವೆ ಪಡೆಯಬಹುದು
ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಆಗಿರುವ ಅಂಚೆ ಇಲಾಖೆಯು ಈಗಾಗಲೇ ಹಲವು ಕಾರ್ಯಗಳನ್ನು ಡಿಜಿಟಲೈಸ್ ಮಾಡಿದ್ದು,ಈಗ ಪೋನ್ ಪೇ,ಗೂಗ್ಲ್ ಪೇ ಮಾದರಿಯಲ್ಲೇ ಡಾಕ್ ಪೇ ಎಂಬ ಹೊಸ ಪೇಮೆಂಟ್ ಆ್ಯಪ್ ಆರಂಭಿಸಿದೆ.
ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಂಚೆ ಇಲಾಖೆಯೂ ಗ್ರಾಹಕರಿಗೆ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಹಲವು ಸೌಲಭ್ಯಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ತನ್ನ ಇಲಾಖೆಯನ್ನು ಡಿಜಿಟಲೈಸ್ ಮೋಡ್ ಮಾಡಿದೆ.
ಈ ವ್ಯವಸ್ಥೆ ಪಡೆಯಲು ಅಂಚೆ ಇಲಾಖೆಯ ಉಳಿತಾಯ ಖಾತೆ ಪಡೆದುಕೊಂಡಿರಬೇಕಿಲ್ಲ. ಆಂಡ್ರಾಯ್ಡ್ ಮೊಬೈಲಿನಲ್ಲಿ ಡಾಕ್ ಪೇ ಆ್ಯಪ್ ಡೌನ್ಲೋಡ್ ಮಾಡಬೇಕು. ಖಾತೆಯ ಬ್ಯಾಂಕ್ ಲಿಂಕ್ ಮಾಡಿದರೆ ಆಯಿತು. ಕ್ಯೂಆರ್ ಕೋಡ್ ಮೂಲಕವೂ ಗ್ರಾಹಕರು ಡಿಜಿಟಲ್ ಪಾವತಿ ಮಾಡಬಹುದು.
ಖಾತೆಗೆ ಹಣ ಜಮೆಯಾಗಿಸುವುದು ಹಾಗೂ ಖಾತೆಯಿಂದ ಹಣ ಪಾವತಿಯಾದರೆ ಖಾತೆದಾರರಿಗೆ ಎಸ್ಸೆಂಎಸ್ ಮೂಲಕ ಮಾಹಿತಿ ರವಾನೆಯಾಗುತ್ತದೆ. ಇದಲ್ಲದೇ ಎಲ್ಲಾ ವಿವರಗಳನ್ನೂ ಪ್ರತ್ಯೇಕವಾಗಿ ಬ್ಯಾಂಕ್ ಸ್ಟೇಟ್ ಮೆಂಟ್ನಲ್ಲಿ ಇಮೇಲ್ ಮೂಲಕವೂ ಪಡೆದುಕೊಳ್ಳಬಹುದು.
ಇತರ ಆ್ಯಪ್ಗಳಲ್ಲಿ ಹಣ ಕಳೆದುಕೊಂಡರೆ ಮರಳಿ ಪಡೆಯುವುದು ಕಷ್ಟ ಆದರೆ ಯಾವುದೇ ತಾಂತ್ರಿಕ ದೋಷದಿಂದ ಡಾಕ್ ಪೇ ವ್ಯವಸ್ಥೆಯಲ್ಲಿ ಹಣ ಕಳೆದುಕೊಂಡರೆ ಚಿಂತಿಸಬೇಕಾಗಿಲ್ಲ. ಕೂಡಲೇ ಸಮೀಪದ ಅಂಚೆ ಕಚೇರಿಗೆ ಹೋಗಿ ಸರಿಪಡಿಸುವ ಅವಕಾಶ ಇದೆ. ಬ್ಯಾಂಕುಗಳಿಗೆ ಅಲೆದಾಡಬೇಕಾಗಿಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕ ಇತರ ಯಾವುದೇ ಬ್ಯಾಂಕ್ ಖಾತೆಗಳಿಗೆ ನೆಫ್ಟ್ ಅಥವಾ ಐಎಂಪಿಎಸ್ ಮೂಲಕ ಹಣ ಕಳುಹಿಸಲು ಅವಕಾಶವಿದೆ ಎನ್ನುತ್ತಾರೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್.