ಅಕ್ಟೋಬರ್ 1 ರ ನಂತರ ಡೆಬಿಟ್,ಕ್ರೆಡಿಟ್ ಕಾರ್ಡ್ ಅಟೊ ಡೆಬಿಟ್ ಕೆಲಸ ಮಾಡಲ್ಲ | ಬ್ಯಾಂಕ್ ಮೂಲಕ ಸ್ವಯಂ ಪಾವತಿ ಅಬಾಧಿತ
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅಟೋ ಡೆಬಿಟ್ ಮೂಲಕ ಪಾವತಿಯಾಗುತ್ತಿದ್ದ ವ್ಯವಹಾರ ಅಕ್ಟೋಬರ್ 1ರ ನಂತರ ಕೆಲಸ ಮಾಡುವುದಿಲ್ಲ.
ಕಾರ್ಡ್ ಬಳಸಿ ನಿರ್ದಿಷ್ಟ ಅವಧಿ ಮುಗಿಯುತ್ತಲೇ ಮತ್ತೆ ನವೀಕರಣವಾಗುವಂತೆ, ನಿಮ್ಮ ಖಾತೆಯಿಂದ ಹಣ ಕಡಿತವಾಗುವಂಥ ವ್ಯವಸ್ಥೆ ಮಾಡಿಕೊಂಡವರಿಗೆ ಅಕ್ಟೋಬರ್ 1ರ ನಂತರ ಈ ಸಿಸ್ಟಮ್ ಕೆಲಸ ಮಾಡುವುದಿಲ್ಲ.
ಐದು ಸಾವಿರ ರುಪಾಯಿಗಳಿಗೆ ಹೆಚ್ಚಿರುವ ಯಾವುದೇ ಪಾವತಿಯಾಗಿದ್ದರೂ ಅದಕ್ಕೆ ಮತ್ತೊಮ್ಮೆ ಏಕಕಾಲದ ಪಾಸ್ವರ್ಡ್ ಸೃಷ್ಟಿಸಿಕೊಂಡು ಗ್ರಾಹಕ ಅನುಮತಿ ಕೊಡಬೇಕಾಗುತ್ತದೆ.
ವಿದ್ಯುತ್ ಬಿಲ್ಲಿನಿಂದ ಹಿಡಿದು ಮನರಂಜನಾ ವೇದಿಕೆಗಳವರೆಗೆ ಯಾವೆಲ್ಲ ಸೇವೆಗಳಿಗೆ ಈ ನಿಗದಿತ ಮೊತ್ತ ಮೀರುವ ವಹಿವಾಟಿಗೆ ‘ಸ್ವಯಂ ಪಾವತಿ’ ಮಾದರಿ ಅನುಸರಿಸುತ್ತಾರೋ ಅವರೆಲ್ಲ ತಮ್ಮ ವಿದ್ಯುತ್, ಮನರಂಜನೆ ಸೇರಿದಂತೆ ಎಲ್ಲವಕ್ಕೂ ಪ್ರತ್ಯೇಕವಾಗಿಯೇ ಪಾವತಿಸಬೇಕಾಗುತ್ತೆ. ಏಕೆಂದರೆ ಸ್ವಯಂ ಪಾವತಿ ಕೆಲಸ ಮಾಡುವುದಿಲ್ಲ.
ಆದರೆ ತಮ್ಮ ಬ್ಯಾಂಕ್ ಖಾತೆಗಳ ಮೂಲಕವೇ ಯಾರು ಸ್ವಯಂ ಪಾವತಿ ಆಯ್ಕೆ ತೆಗೆದುಕೊಂಡಿದ್ದಾರೋ ಆ ಸೇವೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ.ಇದು ಕೇವಲ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ವಿಚಾರದಲ್ಲಿ ಮಾತ್ರ ಬದಲಾಗಿರುವ ನಿಯಮ.
ಕಳೆದ ಮಾರ್ಚ್ ಅಂತ್ಯದಲ್ಲೇ ಇಂಥ ನಿಯಮ ಅನುಷ್ಠಾನಗೊಳಿಸಬೇಕೆಂದು ರಿಸರ್ವ್ ಬ್ಯಾಂಕ್ ಹೇಳಿತ್ತು. ಆದರೆ ಅಷ್ಟು ತ್ವರಿತವಾಗಿ ತಮಗೆ ಇದರ ಅನುಷ್ಠಾನ ಕಷ್ಟವಾಗುತ್ತದೆ ಎಂದು ಬ್ಯಾಂಕುಗಳು ಹೇಳಿದ್ದರಿಂದ ಗಡುವನ್ನು ವಿಸ್ತರಣೆ ಮಾಡಲಾಗಿತ್ತು.