ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ನಡೆದ ಮಹಾ ಲಸಿಕೆ ಅಭಿಯಾನ ಯಶಸ್ವಿ | ಒಂದೇ ದಿನ  2.5 ಕೋಟಿ ಲಸಿಕೆ ನೀಡುವ ಮೂಲಕ ದಾಖಲೆ | ಈ ಅಭಿಯಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ‌!!

ನಿನ್ನೆ ನಡೆದ ಲಸಿಕಾ ಅಭಿಯಾನದಲ್ಲಿ ದೇಶಾದ್ಯಂತ 2.5 ಕೋಟಿ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ‌ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ‌ ಹಂಚುವ ಗುರಿ‌ ಹೊಂದಿತ್ತು. ಇದೀಗ ದೇಶದ ಇತರೆ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ ‌ಇಡೀ ದೇಶದಲ್ಲಿ ದಿನವೊಂದಕ್ಕೆ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ‌9 ಗಂಟೆಯ ಅಂಕಿ ಅಂಶ ಪ್ರಕಾರ ಕರ್ನಾಟಕ ‌ಒಟ್ಟು 27.8 ಲಕ್ಷ‌ ಡೋಸ್ ಲಸಿಕೆ ಹಂಚಿಕೆ ಮಾಡಿ ಮುಂಚೂಣಿಯಲ್ಲಿದ್ದ ಉತ್ತರ ಪ್ರದೇಶ ಹಾಗೂ ಬಿಹಾರವನ್ನು‌ ಹಿಂದಿಕ್ಕಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಪ್ರಕಾರ, 31.75 ಲಕ್ಷ ಡೋಸ್‌ಗಳಿಗೆ ನಿಗದಿಪಡಿಸಿದ ಒಟ್ಟು ಗುರಿಯಲ್ಲಿ ಶೇಕಡಾ 88 ರಷ್ಟನ್ನು ರಾತ್ರಿ 9.30 ಕ್ಕೆ ಸಾಧಿಸಲಾಗಿದೆ. ಎಲ್ಲಾ 30 ಜಿಲ್ಲೆಗಳಲ್ಲಿ ‘ಮೆಗಾ ವ್ಯಾಕ್ಸಿನೇಷನ್ ಡ್ರೈವ್’ ನಡೆಸಲಾಯಿತು ಮತ್ತು ಬಿಬಿಎಂಪಿ 25 ರಿಂದ 30 ಲಕ್ಷ ಡೋಸ್‌ಗಳನ್ನು ನೀಡುವ ಗುರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಘೋಷಿಸಿದ್ದರು.

ಈಗ ಈ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿರುವ ಆರೋಗ್ಯ ಸಚಿವ ಕೆ ಸುಧಾಕರ್ ‘ಇಂದಿನ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ನಮ್ಮ ನರ್ಸಿಂಗ್ ಆಫೀಸರ್‌ಗಳು, ವೈದ್ಯರು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಆರೋಗ್ಯ ತಪಾಸಣೆ ಅಧಿಕಾರಿಗಳು,ಫಾರ್ಮಸಿ ಅಧಿಕಾರಿಗಳು, ಬಿಎಚ್‌ಇಒಗಳು, ಆಶಾ ಕಾರ್ಯಕರ್ತೆಯರು ಮತ್ತು ಇತರರ ತಂಡಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಪ್ರಕಾರ, ಶುಕ್ರವಾರ ಹೆಚ್ಚಿನ ವ್ಯಾಕ್ಸಿನೇಷನ್ ಹೊಂದಿರುವ ಜಿಲ್ಲೆಗಳಲ್ಲಿ : ಬಿಬಿಎಂಪಿ (4.04 ಲಕ್ಷ ಡೋಸ್), ಬೆಳಗಾವಿ (2.49 ಲಕ್ಷ ಡೋಸ್), ದಕ್ಷಿಣ ಕನ್ನಡ (1.34 ಲಕ್ಷ ಡೋಸ್), ಬಳ್ಳಾರಿ (1.40 ಲಕ್ಷ ಡೋಸ್), ತುಮಕೂರು (1.27 ಲಕ್ಷ ಡೋಸ್) ಮತ್ತು ಮಂಡ್ಯ (1.17 ಲಕ್ಷ ಡೋಸ್‌ಗಳು) ಕ್ರಮವಾದ ಸ್ಥಾನದಲ್ಲಿವೆ.

ನಿಗದಿತ ಗುರಿಯನ್ನು ಮೀರಿದ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ (ಬಿಬಿಎಂಪಿ ಹೊರತುಪಡಿಸಿ) ಶೇ 136 ಸಾಧನೆಯನ್ನು ವರದಿ ಮಾಡಿದೆ, ನಂತರ ಶಿವಮೊಗ್ಗ (130%), ಧಾರವಾಡ (119%), ರಾಮನಗರ (118%), ಹಾಸನ (115%) ), ದಾವಣಗೆರೆ (104%), ಮತ್ತು ಚಿಕ್ಕಮಗಳೂರು (102%).ಸ್ಥಾನಗಳನ್ನು ಪಡೆದಿವೆ

ಬಿಬಿಎಂಪಿ ಮಿತಿಯಲ್ಲಿ 3.92 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದ್ದು, ಇದು 5 ಲಕ್ಷದ ಗುರಿಯನ್ನು ಹೊಂದಿತ್ತು. ಏತನ್ಮಧ್ಯೆ, ಕಲ್ಬುರ್ಗಿ  (37%), ಕೊಪ್ಪಳ (55%) ಮತ್ತು ರಾಯಚೂರು (57%)  ಕಳಪೆ ಪ್ರದರ್ಶನ ನೀಡುತ್ತಿರುವ ಜಿಲ್ಲೆಗಳಾಗಿದ್ದು, ಉಳಿದ ಎಲ್ಲಾ ಜಿಲ್ಲೆಗಳು ನಿಗದಿತ ಗುರಿಯ ಅರ್ಧಕ್ಕಿಂತ ಹೆಚ್ಚಿನದನ್ನು ಸಾಧಿಸಿವೆ.

ರಾಜ್ಯದಲ್ಲಿ 5 ಕೋಟಿಗೂ ಅಧಿಕ ಡೋಸ್ ಲಸಿಕೆ ಹಂಚಿಕೆ:

ಈ‌ ಲಸಿಕೆ ಮಹಾ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮಹತ್ವದ ಮೈಲಿಗಲ್ಲು‌ ಸಾಧಿಸಿದೆ. ರಾಜ್ಯದಲ್ಲಿ 5.12 ಕೋಟಿ‌ ಡೋಸ್ ಲಸಿಕೆಯನ್ನು ಹಂಚಿಕೆ ಮಾಡಿದೆ. ಈ ಮೂಲಕ‌ ಅತಿ ಹೆಚ್ಚು ಲಸಿಕೆ ಹಂಚಿಕೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ ಅಲ್ಪ ಮಟ್ಟಿನ ಜಿಗಿತ ಸಾಧಿಸಿದೆ. ಇದೇ ಮಾದರಿಯಲ್ಲಿ ಲಸಿಕೆ ಹಂಚಿಕೆಯಾದರೆ ಡಿಸೆಂಬರ್ ಅಂತ್ಯದೊಳಗೆ ಇಡೀ ಕರ್ನಾಟಕದ ಜನತೆ ಲಸಿಕೆ‌ ಹಾಕಿಸಿಕೊಂಡು ಕೊರೋನಾ ಮೂರನೇ ಅಲೆಯ ಹೊಡೆತದಿಂದ ಪಾರಾಗಲಿದೆ.

Leave A Reply

Your email address will not be published.