ದ.ಕ.ಜಿಲ್ಲೆಯ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಹಾಗೂ ಪುತ್ತೂರು ತಾ.ಪಂ.ಸಿಬಂದಿ ಭರ್ತಿಗೆ ಸಂಜೀವ ಮಠಂದೂರು ಒತ್ತಾಯ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಪ್ರಶ್ನೆ ಸಂಖ್ಯೆ 212 ರಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ರಸ್ತೆಗಳ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರಶ್ನೆ ಕೇಳಿದ್ದರು.

ಇದಕ್ಕೆ ನೀಡಿದ ಉತ್ತರ ತೃಪ್ತಿದಾಯಕವಾಗದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ ಸಂಜೀವ ಮಠಂದೂರು ಅವರು, “ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುಮಾರು 5000 ಮಿಮೀ ಮಳೆಯಾಗುತ್ತದೆ. ಹೆಚ್ಚಿನ ಮಳೆಯ ಕಾರಣದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದೆ. ಪುತ್ತೂರು ತಾಲೂಕು ಒಂದರಲ್ಲಿಯೇ 1900 ಕಿಮೀ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ರಸ್ತೆ ಇದೆ. ಅದರಲ್ಲೂ ಕೇವಲ 36 ಕಿಮೀ ರಸ್ತೆ ಹಾಳಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಇದಕ್ಕೆ ಸುಮಾರು 301 ಲಕ್ಷ ರೂಪಾಯಿ ಅನುದಾನ ಅವಶ್ಯಕತೆ ಇರುವ ಬಗ್ಗೆ ಉತ್ತರದಲ್ಲಿ ತಿಳಿಸಲಾಗಿದೆ. ಇದು ಸರಿಯಲ್ಲ, ಇನ್ನಷ್ಟು ರಸ್ತೆಗಳ ದುರಸ್ತಿ ಆಗಬೇಕಿದೆ. ಇಡೀ ರಸ್ತೆಯ ಅಭಿವೃದ್ಧಿಗೆ ಇಷ್ಟೇ ಅನುದಾನ ಸಾಕಾಗುವುದೋ ಎನ್ನುವುದು ಪ್ರಶ್ನೆ. ಅಷ್ಟು ಮಾತ್ರವಲ್ಲ ಈ ಅನುದಾನಗಳನ್ನು ತಡವಾಗಿ ಬಿಡುಗಡೆ ಮಾಡುವುದರಿಂದ ದುರಸ್ತಿ ಮಾಡಲೂ ಸಾಧ್ಯವಾಗುತ್ತಿಲ್ಲ, ಅಕ್ಟೋಬರ್, ನವೆಂಬರ್ ಅವಧಿಗೆ ಅನುದಾನಗಳು ಬಿಡುಗಡೆಯಾಗಬೇಕು ಎಂದು ಸದನದ ಗಮನಸೆಳೆದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಈ ಬಾರಿ ರಾಜ್ಯದಲ್ಲೇ ಹೆಚ್ಚುವರಿ ಮಳೆಯಾಗಿರುವುದರಿಂದ ರಸ್ತೆ ಹಾಳಾಗಿರುವುದು ನಿಜ. ದಕ ಜಿಲ್ಲೆಯಲ್ಲೂ ರಸ್ತೆ ಹಾನಿಯಾಗಿದೆ, ಎಷ್ಟು ಸಾಧ್ಯವೋ ಅಷ್ಟು ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅನೇಕ ಕಡೆ ಕಾಮಗಾರಿ ಶುರುವಾಗಿದೆ. ಇನ್ನೂ ಹೆಚ್ಚು ಹಣ ಬಿಡುಗಡೆಗೆ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ಈ ವರ್ಷದ ಹಣ ಇನ್ನೂ ಅನುದಾನ ಬಿಡುಗಡೆ ಆಗಿಲ್ಲ.ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಬೇಕಿದೆ‌.ಶೀಘ್ರದಲ್ಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಸಂಜೀವ ಮಠದೂರು ಅವರು ಪುತ್ತೂರು ತಾಲೂಕು ಪಂಚಾಯತ್ ನಲ್ಲಿ 26 ಹುದ್ದೆಗಳಲ್ಲಿ 21 ಹುದ್ದೆಗಳು ಖಾಲಿ ಇದ್ದು, ಇದರ ಭರ್ತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಈ ಕುರಿತು ಕ್ರಮಕೈಗೊಳ್ಳುವ ಭರವಸೆಯನ್ನು ಈಶ್ವರಪ್ಪ ನೀಡಿದರು.

Leave A Reply

Your email address will not be published.