ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಇನ್ನೋರ್ವ ನಟಿ | ದೇವಸ್ಥಾನಕ್ಕೆ ಸಂಬಂಧಿಸಿದ ಹಾವಿನ ಆಕಾರದ ದೋಣಿಯ ಒಳಗೆ ಪಾದರಕ್ಷೆ ಹಾಕಿ ಇಳಿದ ನಟಿ ನಿಮಿಷಾ
ನಟಿಯರು ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗುವಂತಹ ಕೃತ್ಯಗಳನ್ನು ಪುನರಾವರ್ತಿಸಿದ್ದಾರೆ.
ದಕ್ಷಿಣ ಭಾರತದ ಬಹುಭಾಷಾ ನಟಿ ತ್ರಿಷಾ ಮಾಡಿದ ಎಟವಟ್ಟನ್ನೇ ಮಲಯಾಳಂ ಕಿರುತೆರೆ ನಟಿ ಮಾಡಿದ್ದು, ತೀವ್ರ ಟೀಕೆ ಗುರಿಯಾಗಿದ್ದಾರೆ. ಅಲ್ಲದೆ, ನಟಿಯು ಪೊಲೀಸ್ ತನಿಖೆಯನ್ನು ಎದುರಿಸುವಂತಾಗಿದೆ.
ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ಪೊನ್ನಿನ್ ಸೆಲ್ವನ್ ಚಿತ್ರವನ್ನು ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟ್ ಮಾಡಲಾಯಿತು. ನಟಿ ತ್ರಿಷಾ ಅವರ ಮಹತ್ವದ ಪಾತ್ರಗಳನ್ನು ಸೆರೆಹಿಡಿಯಲಾಯಿತು. ಶೂಟಿಂಗ್ ಗ್ಯಾಪ್‌ನಲ್ಲಿ ನಟಿ ತ್ರಿಷಾ ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಒಳಗೆ ಓಡಾಡಿದ್ದರು. ಅದರಲ್ಲೂ ಶಿವಲಿಂಗ ಮತ್ತು ನಂದಿಯ ನಡುವೆ ತ್ರಿಷಾ ಚಪ್ಪಲಿ ಹಾಕಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಅಲ್ಲದೆ, ತ್ರಿಷಾರನ್ನು ಬಂಧಿಸುವಂತೆ ಒತ್ತಾಯಗಳು ಕೂಡ ಕೇಳಿಬಂತು.
ತ್ರಿಷಾ ರೀತಿಯಲ್ಲಿ ಕೇರಳದ ಕಿರುತೆರೆ ನಟಿ ನಿಮಿಷಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಪವಿತ್ರ ದೋಣಿಯೊಂದರ ಒಳಗೆ ಕಾಲಿಗೆ ಚಪ್ಪಲಿ ಹಾಕಿಕೊಂಡು ಇಳಿದಿದ್ದು ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ನಟಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ನಟಿಗೆ ಫೋನ್ ಮತ್ತು ಜಾಲತಾಣಗಳ ಮೂಲಕ ಬೆದರಿಕೆ ಕರೆಗಳು ಕೂಡ ಬರುತ್ತಿವೆ.
ಬೋಟ್‌ನಲ್ಲಿ ಕುಳಿತಿದ್ದ ಫೋಟೋಗಳನ್ನು ನಿಮಿಷಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು. ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಅದನ್ನು ತೆಗೆದುಹಾಕಿದ್ದಾರೆ. ವಿಧ್ಯುಕ್ತ ಹಾವಿನ ದೋಣಿಯ ಮೇಲೆ ಗೊತ್ತಿಲ್ಲದೇ ನಿಂತುಬಿಟ್ಟೆ. ಕ್ಷಮಿಸಿ, ಫೋಟೋಗಳನ್ನು ಡಿಲೀಟ್ ಮಾಡಿದ್ದೇನೆ. ಫೋಟೋ ಅಪ್‌ಲೋಡ್ ಮಾಡಿದಾಗಿನಿಂದ ಅನೇಕ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಿಮಿಷಾ ಹೇಳಿಕೊಂಡಿದ್ದಾರೆ.
ಬೆದರಿಕೆ ಹಾಕುತ್ತಿರುವವರು ನನ್ನ ಕುಟುಂಬದ ಸದಸ್ಯರನ್ನು ಸಹ ಉಳಿಸುವುದಿಲ್ಲ ಎನ್ನುತ್ತಿದ್ದಾರೆ. ದೇವಾಲಯದ ವ್ಯವಸ್ಥಾಪಕರಾಗಲಿ ಅಥವಾ ಸ್ಥಳೀಯರಾಗಲಿ ನನಗೆ ಮೊದಲೇ ಎಚ್ಚರಿಕೆ ನೀಡಿದ್ದಲ್ಲಿ ನಾನು ದೋಣಿಯೊಳಗೆ ಕಾಲಿಡುತ್ತಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಈ ವಿಚಾರ ವಿವಾದವಾಗುತ್ತಿದ್ದಂತೆಯೇ ತಿರುವಲ್ಲ ಪೊಲೀಸ್ ಠಾಣೆಯಲ್ಲಿ ನಿಮಿಷಾ ವಿರುದ್ಧ ದೂರು ದಾಖಲಾಗಿದೆ. ಪುಥುಕುಲಂಗರ ಪಲ್ಲಿಯೋದ ಸೇವಾ ಸಮಿತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.