ಬೆಳಕಿಗೆ ಬಂದಿದೆ 150ಕ್ಕೂ ಹೆಚ್ಚು ಬೀದಿನಾಯಿಗಳನ್ನು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ | ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೆಚ್ಚ ಉಳಿಸಲು ನಡೆಸಲಾಯಿತೇ ಈ ಕೃತ್ಯ ??
ಮನುಷ್ಯ ಮತ್ತೆ ಮತ್ತೆ ರಾಕ್ಷಸ ಪ್ರವೃತ್ತಿಯ ನೀಚ ಕೆಲಸಗಳನ್ನೇ ಮಾಡುತ್ತಿದ್ದಾನೆ. ಮಾನವೀಯತೆ ತನ್ನಲ್ಲಿ ಸತ್ತೇ ಹೋಗಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಇದಕ್ಕೆ ಜೀವಂತ ಸಾಕ್ಷಿಯಂತಿದೆ ಈ ಘಟನೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಘಟನೆ ಬೆಳಕಿಗೆ ಬಂದಿದೆ.
ಕಂಬದಾಳು-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರದಲ್ಲಿ ಮೂಕ ಪ್ರಾಣಿಗಳ ಮಾರಣಹೋಮ ನಡೆದಿದೆ. ತಮ್ಮಡಿಹಳ್ಳಿ ಎಂಪಿಎಂ ಅರಣ್ಯದ ಎಸ್ಎಲ್ ನಂಬರ್ 863, 864, 865, 858ರ ಪ್ರದೇಶದಲ್ಲಿ ನಾಯಿಗಳು ಪತ್ತೆಯಾಗಿದ್ದು, ಐದು ದಿನಗಳ ಹಿಂದೆ ನಾಯಿಗಳನ್ನು ಹೂತಿಡಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತಿಡುವ ವೇಳೆ ನಾಯಿಗಳ ಚೀರಾಟ ಕೇಳಿದೆ. ಆದರೆ ನಂತರ ಯಾವುದೇ ಶಬ್ದಗಳು ಕೇಳಿ ಬಂದಿಲ್ಲ. ಬಳಿಕ ಅನುಮಾನಗೊಂಡ ಗ್ರಾಮದ ಕೆಲ ಯುವಕರು ಶಿವಮೊಗ್ಗದ ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಎನಿಮಲ್ ರೇಸ್ಕೋ ಕ್ಲಬ್ (ಪ್ರಾಣಿ ದಯಾ ಸಂಘ) ಆಗಮನಿಸಿದ್ದು ನಾಯಿಗಳನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಮಣ್ಣಲ್ಲಿ ಸುಮಾರು 150 ನಾಯಿಗಳು ಹೂತಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಗ್ರಾಮ ಪಂಚಾಯತಿಯವರೇ ಮೈಸೂರು ಮೂಲದವರಿಗೆ ಬೀದಿ ನಾಯಿ ಹಿಡಿಯುವ ಟೆಂಡರ್ ನೀಡಿದ್ದಾರೆ ಎಂದು ಕೆಲವು ಮೂಲಗಳು ಮಾಹಿತಿ ನೀಡಿವೆ. ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೆಚ್ಚ ಉಳಿಸಲು ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ಸೃಷ್ಟಿಯಾಗಿದೆ. ಆದರೆ ನಾಯಿಗಳ ಸಾವಿಗೆ ಇನ್ನೂ ಕೂಡ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.