ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ

ಪುತ್ತೂರು : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ ನಡೆದಿದೆ.

ಮೃತ ಬೈಕ್ ಸವಾರ ಪುತ್ತೂರು ಮನೋಜ್ ಕುಂಬ್ರ ಸಮೀಪದ ನಿವಾಸಿ ಎಂದು ಹೇಳಲಾಗಿದೆ.

ಇವರ ತಂಡ ಇಂದು ಬೆಳಿಗ್ಗೆ ಕುಂಬ್ರದಲ್ಲಿ ಇವರ ಡಾರ್ಕ್ ರೈಡರ್ಸ್ ಪೋಸ್ಟರ್ ಬಿಡುಗಡೆಗೊಳಿಸಿ ತಮ್ಮ ಪಯಣ ಆರಂಭಿಸಿತು.ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಆಗಮಿಸಿ ಬಳಿಕ ಉಪ್ಪಿನಂಗಡಿ ಮೂಲಕ ಸಕಲೇಶಪುರಕ್ಕೆ ತಮ್ಮ ರೈಡಿಂಗ್ ಶುರು ಮಾಡಿದ್ದಾರೆ.ಆದರೆ ದುರದೃಷ್ಟವಶಾತ್ ಇವರ ತಂಡದ ಎರಡು ಬೈಕ್ ಅಪಘಾತಕ್ಕೆ ಈಡಾಯಿತು.

ಒಂದು ಘಟನೆ ರೆಖ್ಯ ಗ್ರಾಮದ ಎಂಜಿರದಲ್ಲಿ ನಡೆದು,ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡರು.

ಎಂಜಿರದಲ್ಲಿ ನಡೆದ ಅಪಘಾತದ ವಿಷಯ ಮುಂದೆ ಹೋಗುತ್ತಿದ್ದ ಈತನ ತಂಡದ ಸದಸ್ಯರಿಗೆ ತಿಳಿಯುತ್ತಿದ್ದಂತೆ, ಗುಂಡ್ಯ ಕಡೆಯಿಂದ ತಂಡವು ಹಿಂತಿರುಗಿ ಬಂದಿದೆ. ಹೀಗೆ ಬರುತ್ತಿರುವಾಗ ತಂಡದ ಸದಸ್ಯನೊಬ್ಬ ಚಲಾಯಿಸುತ್ತಿದ್ದ ಇನ್ನೊಂದು ಬೈಕ್ ಕೂಡ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ಲಾಂಗ್ ಬೈಕ್ ರೈಡಿಂಗ್ ಸಾಹಸ ಇಡೀ ಊರಲ್ಲೇ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.ಮಕ್ಕಳ ಭವಿಷ್ಯದ ಕನಸು ಕಾಣುತ್ತಿದ್ದ ಹೆತ್ತವರಿಗೆ ಮಕ್ಕಳ ರೈಡಿಂಗ್ ಸಾಹಸ ಕತ್ತಲು ಆವರಿಸುವಂತೆ ಮಾಡಿದೆ.

Leave A Reply

Your email address will not be published.