ಬೆಳ್ತಂಗಡಿ | ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನಿಡಿಗಲ್ ಸೇತುವೆಯಲ್ಲಿ ಬಾಯ್ತೆರೆದು ನಿಂತಿವೆ ಗುಂಡಿಗಳು
ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೇತುವೆ ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಸೇತುವೆಯ ಒಂದು ಭಾಗದಲ್ಲಿ ಗುಂಡಿಗಳು ಈಗಾಗಲೇ ಬಾಯ್ತೆರೆದು ನಿಂತಿವೆ.
ಸುಮಾರು ನಾಲ್ಕರಿಂದ ಐದು ಹೊಂಡಗಳು ರಸ್ತೆಯ ಮಧ್ಯಭಾಗದಲ್ಲೇ ನಿರ್ಮಾಣವಾಗಿದ್ದು, ಕಬ್ಬಿಣದ ಕಂಬಿ ಹೊರಗಡೆ ಕಾಣುತ್ತಿದೆ. ಕಳೆದ ನವೆಂಬರ್ 22 ರಂದು ಉದ್ಘಾಟನೆಗೊಂಡಿರುವ ಈ ಸೇತುವೆ ಕಾಮಗಾರಿಯ ಬಗ್ಗೆ ನಾಗರಿಕರಲ್ಲಿ ಅನುಮಾನ ಮೂಡಿದ್ದು, ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕೃಷ್ಣಕುಮಾರ್ ರವರು ಸೇತುವೆ ಬಿರುಕು ಬಿಟ್ಟಿರುವ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಇದನ್ನು ಕೂಡಲೇ ಸರಿಪಡಿಸಲಾಗುವುದು ಹಾಗೂ ನಾಳೆಯಿಂದಲೇ ಕೆಲಸ ಆರಂಭವಾಗಲಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಸುಮಾರು 21 ದಿನಗಳ ಕಾಲ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕಾಗಬಹುದು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಆದಷ್ಟು ಬೇಗ ದುರಸ್ತಿ ಕಾಮಗಾರಿ ನಡೆಯಲಿ ಎಂಬುದು ಜನರ ಕೋರಿಕೆ. ಆದರೆ ಒಂದು ವರ್ಷ ತುಂಬುವ ಮೊದಲೇ ಹದಗೆಟ್ಟಿರುವ ಸೇತುವೆ ಕಾಮಗಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದ್ದಂತೂ ಸುಳ್ಳಲ್ಲ.