ಬಾಯಾರಿದಾಗ ಮನುಷ್ಯರಂತೆ ಬೋರ್ ವೆಲ್ ಹೊಡೆದುಕೊಂಡು ನೀರು ಕುಡಿದ ಆನೆ | ನೀರು ಪೋಲಾಗದಂತೆ ಜಾಗ್ರತೆ ಬೇರೆ !!
ಹಲವು ಪ್ರಾಣಿಗಳು ಮನುಷ್ಯರಂತೆ ಕೆಲವು ಕೆಲಸ ಮಾಡುವುದನ್ನು ನಾವು ನೋಡಿರುತ್ತೇವೆ. ತುಂಬಾ ಪ್ರಾಣಿಗಳು ಮನುಷ್ಯನನ್ನು ಎಷ್ಟೋ ಸಂದರ್ಭಗಳಲ್ಲಿ ಅನುಸರಿಸುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿ ಒಂದು ಘಟನೆ ನಡೆದಿದೆ. ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ.
ಜಲ ಶಕ್ತಿ ಸಚಿವಾಲಯ ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಬೋರ್‍ವೆಲ್ ಮುಂದೆ ಆನೆಯೊಂದು ತಾನೇ ನೀರು ಸೇದಿಕೊಂಡು ಕುಡಿಯುತ್ತಿದೆ. 26 ಸೆಕೆಂಡ್‍ನ ಈ ವೀಡಿಯೋದಲ್ಲಿ ಆನೆ ತನಗೆ ಬೇಕಾಗುಷ್ಟು ನೀರನ್ನು ಆನೆ ಪಂಪ್ ಮಾಡಿಕೊಳ್ಳುತ್ತದೆ. ಬಳಿಕ ಕೆಳಗಿರುವ ನೀರನ್ನು ಕುಡಿಯುತ್ತದೆ.
ನೀರು ಕೆಳಗೆ ಬೀಳುತ್ತಿದ್ದಂತೆ ಆನೆ ನೀರು ಕುಡಿದು ದಣಿವಾರಿಸಿಕೊಳ್ಳುತ್ತದೆ. ಈ ವೀಡಿಯೋ ನೋಡಿದ ಹಲವರು ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನೀರಿನ ಮಹತ್ವವನ್ನು ಆನೆ ಸಹ ತಿಳಿದಿದೆ. ಆದರೆ ಮನುಷ್ಯರು ನೈಸರ್ಗಿಕ ಸಂಪತ್ತಿನ ಕುರಿತು ಏಕೆ ಅರಿತಿಲ್ಲ? ನೀರನ್ನು ಉಳಿಸುವ ಕುರಿತು ನಾವು ಆನೆಯಿಂದ ಪಾಠ ಕಲಿಯಬೇಕಿದೆ ಎಂದು ಜಲ ಶಕ್ತಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.
ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 17 ಸಾವಿರ ಬಾರಿ ವೀಕ್ಷಣೆಗೊಳಪಟ್ಟಿದೆ. ಭಾರತೀಯ ಅರಣ್ಯ ಇಲಾಖೆಯ ರಮೇಶ್ ಪಾಂಡೆ ಸಹ ವೀಡಿಯೋ ಶೇರ್ ಮಾಡಿದ್ದಾರೆ. ನೀರು ಹಾಗೂ ಪ್ರಾಣಿಗಳು ಎರಡೂ ಬೆಲೆಬಾಳುವಂತಹವು. ಅವುಗಳ ಉಳಿವಿಗಾಗೀ ನಾವು ರಕ್ಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಆನೆ ಮಾಡಿರುವ ಈ ಕಾರ್ಯ ಜನಮನ್ನಣೆ ಗಳಿಸಿದೆ. ನಿಜವಾಗಿಯೂ ಮನುಷ್ಯರು ಪ್ರಾಣಿಗಳಿಂದ ಹೆಚ್ಚಿನದ್ದೇ ಕಲಿಯಬೇಕಾಗಿದೆ. ಪ್ರಾಣಿಗಳಿಗಿರುವ ಪರಿಸರದ ಮೇಲಿರುವ ಪ್ರೀತಿ, ಮನುಷ್ಯನಲ್ಲಿ ಇದೀಗ ಕಣ್ಮರೆಯಾಗಿದೆ.