ಬಿಜೆಪಿ ಸುಳ್ಯ ಮಂಡಲದಲ್ಲಿದ್ದ ಭಿನ್ನಮತ ಶಮನ | ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು ಸಂಧಾನ ಸೂತ್ರ
ಡಿಸಿಸಿ ಬ್ಯಾಂಕಿನ ಚುನಾವಣೆ ಬಳಿಕ ಸುಳ್ಯ ಮಂಡಲ ಬಿಜೆಪಿಯೊಳಗೆ ಉಲ್ಬಣಿಸಿದ್ದ ಭಿನ್ನಮತ ಇದೀಗ ಅಂತ್ಯಗೊಂಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರವರು ಇಂದು ಸುಳ್ಯಕ್ಕೆ ಬಂದು ಎರಡೂ ತಂಡಗಳ ಮಧ್ಯೆ ಮಾತುಕತೆ ನಡೆಸಿ ಸಂಧಾನ ಸೂತ್ರವೊಂದನ್ನು ರಚಿಸಿ,ಸಮಸ್ಯೆ ಪರಿಹರಿಸಿದ್ದಾರೆ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಬಹುಮತವಿದ್ದ ಬಿಜೆಪಿ ಅಭ್ಯರ್ಥಿ ಸೋತು ಕಾಂಗ್ರೆಸ್ ನ ಅಭ್ಯರ್ಥಿ ಗೆದ್ದ ಕಾರಣದಿಂದಾಗಿ ಸುಳ್ಯಮಂಡಲ ಬಿಜೆಪಿಯೊಳಗೆ ಭಿನ್ನಮತ ಆರಂಭವಾಗಿತ್ತು. ಅಡ್ಡಮತದಾನ ಮಾಡಿದವರು ಯಾರೆಂದು ಕಂಡುಹಿಡಿಯಲು ಸಾಧ್ಯವಾಗದೇ ಇದ್ದುದರಿಂದ ಬಿಜೆಪಿಗೆ ಸೇರಿದ ಎಲ್ಲಾ ಹದಿನೇಳು ಮಂದಿ ಮತದಾರರನ್ನು ಕೂಡಾ ರಾಜೀನಾಮೆ ಕೊಡಿಸುವ ಪ್ರಯತ್ನ ನಡೆದಿತ್ತು. ಆದರೆ ಹಲವು ಮಂದಿ ರಾಜೀನಾಮೆ ಕೊಡದೇ ಇದ್ದುದರಿಂದ ಭಿನ್ನಮತ ಸೃಷ್ಟಿಯಾಗಿತ್ತು. ಈ ಭಿನ್ನಮತವನ್ನು ನಿವಾರಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ಮೂಡಿದ್ದರೂ ಮಂಡಲ ಸಮಿತಿಯ ಬಿಗು ಧೋರಣೆಯಿಂದಾಗಿ ಮಾತುಕತೆಯಾಗಲೀ ಸಮಸ್ಯೆ ಇತ್ಯರ್ಥವಾಗಲಿ ಆಗಿರಲಿಲ್ಲ.
ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ ಮನ್ಮಥ, ಸಂತೋಷ್ ಕುತ್ತಮೊಟ್ಟೆ, ಶೈಲೇಶ್ ಅಂಬೆಕಲ್ಲು ಸೇರಿದಂತೆ ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಈ ಎಲ್ಲಾ ಕಾರಣದಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮನ್ಮಥರ ನೇತೃತ್ವದಲ್ಲಿ ಐವರ್ನಾಡಲ್ಲಿ, ಶೈಲೇಶ್ ಅಂಬೆಕಲ್ಲು ನೇತೃತ್ವದಲ್ಲಿ ದೇವಚಳ್ಳದಲ್ಲಿ ಹೀಗೆ ಹಲವು ಕಡೆ ಬಿ.ಜೆ.ಪಿ.ಯ ಸ್ವಾಭಿಮಾನಿ ಬಳಗ ಸ್ಪರ್ಧಿಸಿತ್ತು. ಸ್ವಾಭಿಮಾನಿ ಬಳಗ ಸ್ಪರ್ಧಿಸಿದ ಬಹುತೇಕ ಕಡೆ ಜಯಭೇರಿ ಬಾರಿಸಿತ್ತು.
ಸಂಧಾನದ ಬಳಿಕ ಪತ್ರಿಕಾಗೋಷ್ಠಿ
ಸಂಘಟನೆ ಬೆಳೆದಂತೆ, ಕಾರ್ಯಕರ್ತರ ಪಡೆ ವಿಸ್ತಾರವಾದಂತೆ ನಾಯಕತ್ವ ವಹಿಸುವವರು ಹೆಚ್ಚಾಗುತ್ತಾರೆ. ಇದರಿಂದ ಸಹಜವಾಗಿ ಸಣ್ಣ ಪುಟ್ಟ ಮನಸ್ತಾಪಗಳು ಬರುತ್ತವೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿನ ಭಿನ್ನಮತವನ್ನು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ೪ ಗೋಡೆಗಳ ಮಧ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದರು.
ಅವರು ಸುಳ್ಯ ಬಿ.ಜೆ.ಪಿ. ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಂತೆ ಬಾಳುತ್ತಿದ್ದೇವೆ. ಒಂದು ಕುಟುಂಬದಲ್ಲಿ ಮನಸ್ತಾಪಗಳು ಬರುವಾಗ ಕುಟುಂಬದ ಹಿರಿಯರು ಸಂಧಾನ ನಡೆಸುವಂತೆ ನಾವು ಸಂಧಾನ ನಡೆಸಿದ್ದೇವೆ ಎಂದರು.
ಸಹಕಾರಿ ಸಂಘಗಳ ಚುನಾವಣೆ ಗ್ರಾ.ಪಂ. ಚುನಾವಣೆ ವೇಳೆ ನಡೆದ ತಪ್ಪುಗಳ ಕುರಿತು ಸಂಬಂಧಪಟ್ಟವರು ತಪ್ರೊಪ್ಪಿಕೊಂಡಿದ್ದು ಅವರ ಈ ಹಿಂದಿನ ಸಾಮಾನ್ಯ ಸದಸ್ಯತ್ವ ಹಾಗೂ ಈ ಹಿಂದೆ ಪಕ್ಷ ವಹಿಸಿದ್ದ ಜವಬ್ದಾರಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದರು. ಸಹಕಾರಿ ಸಂಘದ ಚುನಾವಣೆಯಲ್ಲಿನ ಗೊಂದಲಗಳ ಕುರಿತು ಸಹಕಾರ ಭಾರತಿ ಕ್ರಮ ಕೈಗೊಳ್ಳಲಿದೆ ಎಂದರು.
ಮುಂಬರುವ ತಾ.ಪಂ.ಜಿ.ಪಂ. ಚುನಾವಣೆ ಎದುರಿಸಲು ನಮ್ಮ ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಮೀಸಲಾತಿ ಕುರಿತು ಹೈಕೋರ್ಟ್ ಯಾವ ಆದೇಶ ನೀಡಿದರೂ ಬಿಜೆಪಿಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧ್ಯಕ್ಷರು ಹೇಳಿದರು.
ಎಸ್.ಎನ್.ಮನ್ಮಥ ಮಾತನಾಡಿ, ಹಿಂದೆ ಪಕ್ಷಕ್ಕಾದ ತೊಡಕಿನ ಕುರಿತು ವಿಷಾದವಿದೆ. ಮುಂದಿನ ದಿನಗಳಲ್ಲಿ ನಾವು ಪಕ್ಷ ಹೇಳಿದಂತೆ ಕಾರ್ಯನಿರ್ವಹಿಸುತ್ತೇವೆ.ಪಕ್ಷ ನೀಡುವ ಜವಬ್ದಾರಿಯನ್ನೂ ನಿರ್ವಹಿಸುತ್ತೇವೆ. ನಾವೆಲ್ಲರೂ ನಾಳೆಯಿಂದ ಒಗ್ಗಟ್ಟಿನಿಂದ ಇರುತ್ತೇವೆ ಎಂದರು.
ಈ ಸಂದರ್ಭ ಮಂಡಲಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಂಡಲ ಸಮಿತಿ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಎವಿ ತೀರ್ಥರಾಮ, ಪ್ರಮುಖರಾದ ವೆಂಕಟ್ ವಳಲಂಬೆ, ಸುಬೋದ್ ಶೆಟ್ಟಿ ಮೇನಾಲ, ಎನ್.ಎ.ರಾಮಚಂದ್ರ, ಕೇಶವ ಭಟ್ ಮುಳಿಯ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.