ಚೆನ್ನಾವರ ಶಾಲಾ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಸವಣೂರು : ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೊಡಮಾಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಎನ್ ಆಯ್ಕೆಯಾಗಿದ್ದಾರೆ.

 

2003ರಲ್ಲಿ ಚೆನ್ನಾವರ ಶಾಲೆಗೆ ಸಹಶಿಕ್ಷಕಿಯಾಗಿ ಸೇರ್ಪಡೆಗೊಂಡು ನಿರಂತರವಾಗಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವಾರು ಧನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಇವರು ಮಕ್ಕಳಿಗೆ ಪಾಠವಲ್ಲದೆ ಹಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದು,ಚೆನ್ನಾವರ ಶಾಲೆಯ ಇವರ 18 ವರ್ಷ ಸೇವಾವಧಿಯಲ್ಲಿ ನಾಲ್ಕು ಬಾರಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ದೊರಕಿದೆ.

ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ನೀಡಬೇಕೆಂದು ಸಹಶಿಕ್ಷಕಿ ಶ್ವೇತಾ ಅವರೊಂದಿಗೆ ಗುಬ್ಬಚ್ಚಿ ಸ್ಪೀಕಿಂಗ್ ತರಗತಿ ಆರಂಭಿಸಿದರು. ಪ್ರತಿಭಾ ಕಾರಂಜಿಯಲ್ಲಿ ಹಲವು ಬಾರಿ ಶಾಲೆಗೆ ಪ್ರಶಸ್ತಿ ಬರಲು ಶ್ರಮಿಸಿದ್ದಾರೆ.

ಹಾಡುಗಾರಿಕೆ, ಪ್ರಸಂಗ ಗೀತೆ ರಚನೆ,ಕ್ರಿಯಾ ವಿಭಾಗದಲ್ಲಿ ಒತ್ತಕ್ಷರಕ್ಕೆ ಪ್ರಸಂಗ ಗೀತೆ ರಚನೆ ಮೊದಲಾದ ಹವ್ಯಾಸಗಳನ್ನು ಹೊಂದಿರುವ ಇವರು ಮಕ್ಕಳಿಗೂ ಕಲಿಸುತ್ತಿದ್ದಾರೆ.

ಚೆನ್ನಾವರ ಶಾಲಾ ಬೆಳ್ಳಿಹಬ್ಬವನ್ನು ಯಶಸ್ವಿಯಾಗಿ ನಡೆಸಿರುವುದು ಹೆಗ್ಗಳಿಕೆ,ಶಾಲೆಯಲ್ಲಿ ಕಲಿಕಾ ಕುಟೀರ ನಿರ್ಮಾಣ, ಮಳೆಕೊಯ್ಲು ಘಟಕ,ಶಾಲಾ ಆಟದ ಮೈದಾನ ವಿಸ್ತರಣೆ, ಶಾಲೆಗೆ ಆವರಣ ಗೋಡೆ, ಶಾಲೆಯಲ್ಲಿ ಕಂಪ್ಯೂಟರ್ ಅಳವಡಿಕೆ ಸೇರಿದಂತೆ ಹಲವು ಕಾರ್ಯಗಳು ಇವರ ಸೇವಾವಧಿಯಲ್ಲಿ ನಡೆದಿದೆ.

ವಿಶೇಷತೆ ಎಂದರೆ ಇವರ ತಂದೆ,ಅಕ್ಕ,ತಂಗಿ ಕೂಡ ಶಿಕ್ಷಕರೇ.
1962ರಲ್ಲಿ ಸುಬ್ಬಣ್ಣ ಭಟ್-ಶಾರದೆ ದಂಪತಿಗಳ ಪುತ್ರಿಯಾಗಿ ಜನಿಸಿರುವ ಇವರು ಬಿ.ಎ.ಪದವೀಧರರು. ಪತಿ ಡಾ.ವೆಂಕಟರಮಣ ಮೊಳೆಯಾರ್,ಮಕ್ಕಳು ವರ್ಷಾ,ದುರ್ಗಾರ್ಚನ.

Leave A Reply

Your email address will not be published.