ವಿಟ್ಲ ಎಸೈ ಆಗಿದ್ದ ವಿನೋದ್ ರೆಡ್ಡಿ ಮೇಲೆ ಗುಂಡು ಹಾರಿಸಿ‌ ಕೊಲೆಯತ್ನ‌ ಪ್ರಕರಣ | ಓರ್ವ ಆರೋಪಿಗೆ ಷರತ್ತು ಬದ್ಧ ಜಾಮೀನು

ಬಂಟ್ವಾಳ : ಕಳೆದ ಮಾರ್ಚ್ ತಿಂಗಳಲ್ಲಿ ವಿಟ್ಲ ಪೊಲೀಸ್ ಠಾಣಾ ಎಸೈ ವಿನೋದ್ ರೆಡ್ಡಿ ಅವರ ಮೇಲೆ, ಗುಂಡು ಹಾರಿಸಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ, ಕೇರಳ ರಾಜ್ಯದ ಉಪ್ಪಳದ ಹೈದರ್ ಎಂಬವನಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.

ಈ ಕೊಲೆಯತ್ನ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳ ಪೈಕಿ, ಉಪ್ಪಳದ ಹೈದರ್‌ಗೆ ನ್ಯಾಯಾಲಯ ಜಾಮೀನು ನೀಡಿದೆ.

ಮಾ. 25ರಂದು ಬೆಳಗಿನ ಜಾವ ಬಂಟ್ವಾಳ ತಾಲೂಕು ಬಾಕ್ರಬೈಲು ಕಡೆಯಿಂದ, ಸಾಲೆತ್ತೂರು ಕಡೆಗೆ ಬಿಳಿ ಬಣ್ಣದ ಕಾರು ಬರುತ್ತಿದ್ದು, ಈ ಕಾರನ್ನು ನಿಲ್ಲಿಸುವಂತೆ ವಿಟ್ಲದ ಅಂದಿನ ಎಸ್‌ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಸೂಚಿಸಿದಾಗ, ಕಾರಿನ ಚಾಲನಾ ಸೀಟಿನ ಎಡಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು, ಪಿಸ್ತೂಲಿನಿಂದ ಎಸ್‌ಐ ಕಡೆಗೆ, ಗುರಿಯಿಟ್ಟು ಸಿಡಿಸುವುದನ್ನು ಕಂಡ ಎಸ್‌ಐ ಯವರು, ಬದಿಗೆ ಸರಿದು ಗುಂಡಿನಿಂದ ತಪ್ಪಿಸಿಕೊಂಡಿದ್ದರು. ನಂತರ ಆರೋಪಿಗಳು ಸಂಚರಿಸುತ್ತಿದ್ದ ಕಾರು ವೇಗವಾಗಿ ಚಲಿಸಿ, ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು, ರಸ್ತೆಬದಿಯ ಕೆಸರಲ್ಲಿ ಹೂತುಹೋಗಿ ಬಾಕಿಯಾಗಿತ್ತು. ಕಾರಿನಲ್ಲಿದ್ದವರು ತಪ್ಪಿಸಿಕೊಂಡು, ಓಡಿ ಹೋಗಲು ಪ್ರಯತ್ನಿಸಿದಾಗ, ಆರೋಪಿಗಳ ಪೈಕಿ, ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಕಾರನ್ನು ಪರಿಶೀಲಿಸಿದಾಗ,ಆರೋಪಿತರಿಂದ ವಿದೇಶಿ ನಿರ್ಮಿತ ಪಿಸ್ತೂಲುಗಳು, ಪಿಸ್ತೂಲ್ ಗೆ ಬಳಸುವ ಕಚ್ಚಾ ಗುಂಡುಗಳು, ಬಂದೂಕುಗಳು, ಮಾರಕಾಯುಧಗಳು ಹಾಗೂ ಮಾದಕ ದ್ರವ್ಯಗಳು ಪತ್ತೆಯಾಗಿತ್ತು,ಇವುಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪರಾರಿಯಾದ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ ಪೊಲೀಸರು, ಏ.5ರಂದು ಬೆಳಗಿನ ಜಾವ ಮಾಣಿ ಸಮೀಪ ಉಳಿದ ಆರೋಪಿಗಳನ್ನು ಪತ್ತೆಹಚ್ಚಿ, ಅವರಿಂದ ವಿದೇಶಿ ಪಿಸ್ತೂಲುಗಳು, ಬಂದೂಕುಗಳು, ಕಚ್ಚಾ ಗುಂಡುಗಳನ್ನು ವಶಪಡಿಸಿಕೊಂಡು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಆರೋಪಿಗಳಿಗೆ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿತ್ತು.

ಆರೋಪಿಗಳು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಪೋಲಿಸರಿಂದ ತಪ್ಪಿಸಿಕೊಳ್ಳಲು ಕೇರಳದಿಂದ ಕರ್ನಾಟಕಕ್ಕೆ ಬರುವ ಸಮಯ, ವಿಟ್ಲ ಪೊಲೀಸರಿಗೆ ಸಿಕ್ಕಿದ ಮಾಹಿತಿ ಮೇರೆಗೆ, ಆರೋಪಿಗಳ ಬಂಧನಕ್ಕೆ, ವಿಟ್ಲ ಪೊಲೀಸರು ಬಲೆ ಬೀಸಿದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ಆರೋಪಿಗಳ ಮೇಲೆ ಮಂಜೇಶ್ವರ ಮತ್ತು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿತ್ತು. ಇದೀಗ ಪ್ರಕರಣದ ಏಳು ಜನ ಆರೋಪಿಗಳ ಪೈಕಿ, ಉಪ್ಪಳದ ಹೈದರ್ ಎಂಬಾತನಿಗೆ, ದ ಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

Leave A Reply

Your email address will not be published.